ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣ; ನಾಲ್ವರು ಆರೋಪಿಗಳಿಗೆ ಜಾಮೀನು ನೀಡಿದ ಹೈಕೋರ್ಟ್

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಪ್ರಕರಣದ 6ನೇ ಆರೋಪಿ ಬೆಳಗಾವಿಯ ಭರತ್‌ ಜಯವಂತ್‌ ಕುರಾನೆ, 9ನೇ ಆರೋಪಿ ಮಹಾರಾಷ್ಟ್ರದ ಸತಾರದ ಸುಧನ್ವ ಗೊಂಧಾಲೇಕರ್‌, 13ನೇ ಆರೋಪಿ ಶಿವಮೊಗ್ಗದ ಶಿಕಾರಿಪುರದ ಸುಜಿತ್‌ ಕುಮಾರ್‌ ಹಾಗೂ 16ನೇ ಆರೋಪಿ ಮಹಾರಾಷ್ಟ್ರದ ಔರಂಗಾಬಾದ್‌ನ ಶ್ರೀಕಾಂತ್‌ ಪಂಗಾರ್ಕರ್‌ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ಇದರೊಂದಿಗೆ, ಪ್ರಕರಣದ 18 ಆರೋಪಿಗಳಲ್ಲಿ 8 ಮಂದಿಗೆ ಜಾಮೀನು ದೊರೆತಂತಾಗಿದೆ. ಸುಧನ್ವ ಗೊಂಧಾಲೇಕರ್, ಸುಜಿತ್ ಕುಮಾರ್ ಹಾಗೂ ಶ್ರೀಕಾಂತ್ ಪಂಗಾರ್ಕರ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ಮತ್ತೊಬ್ಬ ಆರೋಪಿ ಭರತ್ ಜಯವಂತ್ ಕುರಾನೆ ಪರ ಅಮರ್ ಕೊರಿಯಾ ವಾದ ಮಂಡಿಸಿದ್ದರು.

ಆರೋಪಿಗಳು ತಲಾ 1 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್‌, ಇಬ್ಬರ ಶ್ಯೂರಿಟಿ ಒದಗಿಸಬೇಕು. ವಿಚಾರಣಾ ನ್ಯಾಯಾಲಯ ವಿನಾಯಿತಿ ನೀಡದ ಹೊರತು ವಿಚಾರಣೆಯ ಎಲ್ಲ ದಿನ ವಿಚಾರಣೆಗೆ ಹಾಜರಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂಥದ್ದೇ ಆರೋಪದಲ್ಲಿ ಭಾಗಿಯಾಗುವಂತಿಲ್ಲ. ಪ್ರಕರಣ ಇತ್ಯರ್ಥವಾಗುವವರೆಗೆ ನ್ಯಾಯಾಲಯ ಅನುಮತಿಸದ ಹೊರತು ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿರುವ ಹೈಕೋರ್ಟ್, ಆರೋಪಿಗಳು ಈ ಯಾವುದೇ ಷರತ್ತು ಉಲ್ಲಂಘಿಸಿದರೂ ಜಾಮೀನು ರದ್ದತಿಗೆ ಪ್ರಾಸಿಕ್ಯೂಷನ್ ಮನವಿ ಮಾಡಬಹುದು ಎಂದು ಹೇಳಿದೆ.

ಕೊಲೆಯಾದಾಗ ಅರ್ಜಿದಾರರು ಸ್ಥಳದಲ್ಲಿರಲಿಲ್ಲ. 2ನೇ ಆರೋಪಿ ಪರಶುರಾಮ್‌ ವಾಘ್ಮೋರೆ ಮತ್ತು 3ನೇ ಆರೋಪಿ ಗಣೇಶ್‌ ಮಿಸ್ಕಿನ್‌ ವಿರುದ್ಧ ಕೊಲೆ ಮಾಡಿದ ಆರೋಪವಿದೆ. ಉಳಿದವರ ಜತೆ ಸೇರಿ ಕೊಲೆಗೆ ವಾಹನ, ಶಸ್ತ್ರಾಸ್ತ್ರ ಪೂರೈಕೆ ಇನ್ನಿತರ ಕೃತ್ಯಗಳ ಮೂಲಕ ಕೊಲೆಗೆ ಪಿತೂರಿ ನಡೆಸಿದ ಆರೋಪ ಅರ್ಜಿದಾರರ ಮೇಲಿದೆ. ಇದೇ ಆರೋಪಗಳಿದ್ದ ಅಮಿತ್‌ ದಿಗ್ವೇಕರ್‌ (5ನೇ ಆರೋಪಿ), ಎಚ್‌.ಎಲ್‌. ಸುರೇಶ್‌ (7ನೇ ಆರೋಪಿ), ಎನ್‌. ಮೋಹನ್‌ ನಾಯಕ್‌ (11ನೇ ಆರೋಪಿ) ಮತ್ತು ಕೆ. ಟಿ. ನವೀನ್‌ ಕುಮಾರ್‌ (17ನೇ ಆರೋಪಿ) ಅವರಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ಮೋಹನ್‌ ನಾಯಕ್‌ಗೆ ಮೊದಲಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಈ ಆದೇಶವನ್ನು ಸುಪ್ರೀಂಕೋರ್ಟ್‌ ಸಹ ಎತ್ತಿ ಹಿಡಿದಿದೆ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

Related Articles

Comments (0)

Leave a Comment