ಪೋಕ್ಸೋ ಪ್ರಕರಣ: ಮುರುಘಾ ಶರಣರ ಅರ್ಜಿ ವಜಾಗೊಳಿಸಿದ ಹೈಕೋರ್ಟ್
- by Jagan Ramesh
- September 13, 2024
- 669 Views
ಬೆಂಗಳೂರು: ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದಾಖಲಿಸಿಕೊಂಡಿರುವ ಸಂತ್ರಸ್ತೆಯ ಹೇಳಿಕೆಯ ಭಾಗವನ್ನು ತೆಗೆದುಹಾಕಲು ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ ಪ್ರಕರಣದ ಆರೋಪಿಯೂ ಆದ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಕುರಿತು ಶಿವಮೂರ್ತಿ ಮುರುಘಾ ಶರಣರು (64) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕಟಿಸಿದ್ದು, ಶರಣರ ಮನವಿಯನ್ನು ತಿರಸ್ಕರಿಸಿ ಆದೇಶಿಸಿದೆ. ತೀರ್ಪಿನ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣವೇನು?
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಸದ್ಯ ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಿವಮೂರ್ತಿ ಶರಣರ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಸೆಕ್ಷನ್ 376 (2) (ಎನ್), 376 (3), 504 ಮತ್ತು ಪೋಕ್ಸೋ ಕಾಯ್ದೆ–2012ರ ಸೆಕ್ಷನ್ 5 (ಎಲ್) ಮತ್ತು 6ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಚಿತ್ರದುರ್ಗ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ (ಪೋಕ್ಸೋ ವಿಶೇಷ ಕೋರ್ಟ್) ಪ್ರಕರಣ ವಿಚಾರಣೆಯ ಹಂತದಲ್ಲಿದೆ.
ವಿಚಾರಣಾ ನ್ಯಾಯಾಲಯ 2024ರ ಜುಲೈ 1ರಂದು ಪ್ರಕರಣದ ಸಂತ್ರಸ್ತೆಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಆ ಹೇಳಿಕೆಯ ಭಾಗವನ್ನು ವಿಚಾರಣಾ ಪ್ರಕ್ರಿಯೆಯಿಂದ ತೆಗೆದುಹಾಕಲು ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಶಿವಮೂರ್ತಿ ಶರಣರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
Related Articles
Thank you for your comment. It is awaiting moderation.
Comments (0)