- ಪ್ರಮುಖ ಸಮಾಚಾರಗಳು
- ವ್ಯಕ್ತಿಪರಿಚಯ
- Like this post: 11
ಎಸ್.ಜಿ. ಸುಂದರಸ್ವಾಮಿ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಹೈಕೋರ್ಟ್ನಲ್ಲಿ ಉಪನ್ಯಾಸ
- by Jagan Ramesh
- September 12, 2024
- 156 Views
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಹಿರಿಯ ವಕೀಲರಾದ ಎಸ್.ಎಸ್. ನಾಗಾನಂದ ಅವರ ತಂದೆ, ಮಾಜಿ ಅಡ್ವೊಕೇಟ್ ಜನರಲ್ ದಿವಂಗತ ಎಸ್.ಜಿ. ಸುಂದರಸ್ವಾಮಿ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ‘ಕರ್ನಾಟಕ ಜ್ಯೂರಿಸ್ಟ್ಸ್ ಟ್ರಸ್ಟ್’ ಹಾಗೂ ‘ಕರ್ನಾಟಕ (ಇಂಡಿಯಾ) ಸೆಕ್ಷನ್ ಆಫ್ ಇಂಟರ್ ನ್ಯಾಷನಲ್ ಕಮಿಷನ್ ಆಫ್ ಜ್ಯೂರಿಸ್ಟ್ಸ್’ ವತಿಯಿಂದ ‘ಡಿಜಿಟಲ್ ಜಗತ್ತಿನಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಸವಾಲುಗಳು’ ಎಂಬ ವಿಷಯದ ಕುರಿತು ಇದೇ 13ರಂದು (ಶುಕ್ರವಾರ) ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಹೈಕೋರ್ಟ್ ಕಟ್ಟಡದ ಎರಡನೇ ಮಹಡಿಯಲ್ಲಿರುವ ಮುಖ್ಯ ಪೋಷಕರ ಸಭಾಂಗಣದಲ್ಲಿ ಸಂಜೆ 4.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ‘ಲಾಏಷ್ಯಾ’ ಸಂಸ್ಥೆಯ ಅಧ್ಯಕ್ಷರೂ ಆದ ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು ಉಪನ್ಯಾಸ ನೀಡಲಿದ್ದಾರೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ, ರಾಜ್ಯ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹೈಕೋರ್ಟ್ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸುಂದರಸ್ವಾಮಿ ಅವರ ಪರಿಚಯ:
ಸರಳ ಜೀವಿ ಹಾಗೂ ಶ್ರೇಷ್ಠ ಚಿಂತಕರೂ ಆಗಿದ್ದ ಎಸ್.ಜಿ. ಸುಂದರಸ್ವಾಮಿ ಅವರು ಅಸಾಧ್ಯವೆನ್ನುವ ಕೆಲಸಗಳನ್ನೂ ಸಾಧಿಸಿ ತೋರಿಸಿದ ವ್ಯಕ್ತಿ ಎಂದು ಅವರನ್ನು ಕಂಡವರು ಹೇಳುವ ಸಾಮಾನ್ಯ ಮಾತು. 1924ರ ಸೆಪ್ಟೆಂಬರ್ 22ರಂದು ಜನಿಸಿದ ಸುಂದರಸ್ವಾಮಿ, ಆ ಕಾಲಕ್ಕೆ ವಕೀಲಿ ವೃತ್ತಿಯಲ್ಲಿ ದೊಡ್ಡ ಹೆಸರು ಮಾಡಿದ್ದ ಹಾಗೂ ಸಾಮಾಜಿಕ ಹೋರಾಟಗಾರರಾಗಿದ್ದ ಎಸ್.ಡಿ.ಗಣೇಶ್ ರಾವ್ ಅವರ ಮೊದಲ ಪುತ್ರ. ಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದ ಸುಂದರಸ್ವಾಮಿ ಅವರು ಸೆಂಟ್ರಲ್ ಕಾಲೇಜಿನಿಂದ ವಿಜ್ಞಾನ ವಿಷಯದಲ್ಲಿ ಪದವಿ ಪಡೆದರು. 1946ರಲ್ಲಿ ಮದ್ರಾಸು ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದ ನಂತರ ತಮ್ಮ ತಂದೆ ಗಣೇಶ್ ರಾವ್ ಅವರ ಕಚೇರಿಯಲ್ಲೇ ವಕೀಲಿ ವೃತ್ತಿ ಆರಂಭಿಸಿದರು.
ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಪರಿಣತರಾದ ಸುಂದರಸ್ವಾಮಿ ಅವರು, ಬ್ಯಾಂಕ್, ಹಣಕಾಸು ಸಂಸ್ಥೆಗಳು ಮತ್ತು ಕಂಪನಿಗಳ ವ್ಯಾಜ್ಯಗಳನ್ನು ಪ್ರತಿನಿಧಿಸಿ ಅತ್ಯತ್ತಮ ವೃತ್ತಿಪರತೆ ಸಾಧಿಸುವ ಮೂಲಕ ಯಶಸ್ವಿಯಾದರಲ್ಲದೆ, ತಮ್ಮ ತಂದೆಯವರ ಕಚೇರಿಯ ಹೆಸರನ್ನು ಉತ್ತುಂಗಕ್ಕೆ ಏರಿಸಿದರು. 1970ರಲ್ಲಿ ಕರ್ನಾಟಕ ರಾಜ್ಯದ (ಅಂದಿನ ಮೈಸೂರು ರಾಜ್ಯ) ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡು, ಎರಡು ವರ್ಷಗಳ ಕಾಲ ಸರ್ಕಾರಕ್ಕೆ ಸೇವೆ ಸಲ್ಲಿಸಿದರು.
ಕರ್ನಾಟಕ ಹೈಕೋರ್ಟ್ ಹಿರಿಯ ವಕೀಲರಾಗಿಯೂ ಪದೋನ್ನತಿ ಪಡೆದ ಸುಂದರಸ್ವಾಮಿ ಅವರು ಕಾನೂನಿನ ಎಲ್ಲ ಶಾಖೆಗಳಲ್ಲಿಯೂ ಪರಿಣತರಾಗಿದ್ದರಲ್ಲದೇ, ಅಸಂಖ್ಯ ಪ್ರಕರಣಗಳನ್ನು ಪ್ರತಿನಿಧಿಸಿದ್ದರು.
ಸಿವಿಲ್ ಕಾನೂನು, ಸಾಂವಿಧಾನಿಕ ಕಾನೂನು, ತೆರಿಗೆ ನಿಯಮಗಳು, ಬಾಡಿಗೆ ನಿಯಂತ್ರಣ ಕಾನೂನು, ವಿದ್ಯುತ್ ಕಾನೂನುಗಳು, ವಾರಸುದಾರರ ನಿಯಮಗಳು, ಚುನಾವಣಾ ನಿಯಮಗಳಲ್ಲಿ ಸುಂದರಸ್ವಾಮಿ ತಜ್ಞರಾಗಿದ್ದರು. ಅವರು ಪ್ರತಿನಿಧಿಸಿದ ಅನೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಕಟವಾದ ತೀರ್ಪುಗಳು “ಲಾ ರಿಪೋರ್ಟ್” ನಲ್ಲಿ ದಾಖಲಾಗಿವೆ. ಪ್ರತಿ ಪ್ರಕರಣವನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುವ ಮುನ್ನ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸುಂದರಸ್ವಾಮಿ ಅವರ ವೃತ್ತಿಪರತೆ ಇಂದಿನ ಯುವ ವಕೀಲರಿಗೆ ಮಾದರಿಯಾಗಿದೆ. ಕಕ್ಷಿದಾರರಿಂದ ಹಿಡಿದು, ಕಿರಿಯ ವಕೀಲರು, ಹಿರಿಯ ವಕೀಲರ ಮತ್ತು ನ್ಯಾಯಮೂರ್ತಿಗಳ ಗೌರವಕ್ಕೆ ಸುಂದರಸ್ವಾಮಿ ಪಾತ್ರರಾಗಿದ್ದರು.
ಸುಂದರಸ್ವಾಮಿ ಅವರು ತಮ್ಮ ಎದುರಾಳಿಗಳ ಜತೆಗೆ, ಅದರಲ್ಲೂ ತಮಗಿಂತ ಕಿರಿಯರೊಂದಿಗೆ ನ್ಯಾಯಯುತವಾಗಿ ನಡೆದುಕೊಳ್ಳುತ್ತಿದ್ದರು. ವಕೀಲರಾಗಿ ಅವರ ಗುಣಗಳು ಇಂದಿನ ಪೀಳಿಗೆಗೆ ಉದಾಹರಣೆಯಾಗಿವೆ. ವೃತ್ತಿ ಜೀವನದಲ್ಲಿ ಅವರು ಏರಿದ ಎತ್ತರ ತುಂಬಾ ಗಮನಾರ್ಹವಾಗಿದ್ದರೂ, ವಿನಮ್ರತೆಯ ನಡೆಗಳಿಂದ ಅವರೊಬ್ಬ ಉತ್ತಮ ವ್ಯಕ್ತಿತ್ವದ ಮೂಸೆಯಾಗಿದ್ದರು. ಪರೋಪಕಾರಿ ಮನೋಭಾವ ಹೊಂದಿದ್ದ ಸುಂದರಸ್ವಾಮಿ ಅವರು ಅಗತ್ಯವಿದ್ದ ಯಾರಿಗಾದರೂ ಸಹಾಯ ಮಾಡುವುದರಿಂದ ಯಾವತ್ತೂ ದೂರ ಇರುತ್ತಿರಲಿಲ್ಲ. ಮಾನವೀಯತೆ ಹಾಗೂ ನಮ್ರತೆ ಅವರ ಅತ್ಯದ್ಭುತ ಗುಣ ಲಕ್ಷಣಗಳಾಗಿದ್ದವು. ಇದನ್ನು ಅವರ ವೃತ್ತಿ ಜೀವನದ ಸಾಧನೆಗಳೇ ಮಾತನಾಡುತ್ತವೆ.
ಸುಂದರಸ್ವಾಮಿ ಅವರು 1996ರ ಜುಲೈ 17ರಂದು ಪ್ರಕರಣವೊಂದರಲ್ಲಿ ವಾದ ಮಂಡಿಸಿದ ನಂತರ ನ್ಯಾಯಾಲಯದಲ್ಲಿ ಇರುವಾಗಲೇ ನಿಧನ ಹೊಂದಿದರು.
ಸಾಮಾಜಿಕವಾಗಿ ಬಹಳಷ್ಟು ಸಕ್ರಿಯರಾಗಿದ್ದ ಅವರು ಬೆಂಗಳೂರಿನ ಪಶ್ಚಿಮದ ಅಂಚಿನಲ್ಲಿರುವ ಸೊಂಡೆಕೊಪ್ಪದಲ್ಲಿನ ತಮ್ಮ ಕುಟುಂಬದ ಶ್ರೀ ಚೆನ್ನಕೇಶವ ಸ್ವಾಮಿ ದೇವಸ್ಥಾನ, ಪುಟ್ಟಪರ್ತಿಯ ಶ್ರೀ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್, ತಲಕಾಡಿನ ಶ್ರೀ ರಾಮಕೃಷ್ಣ ಆಶ್ರಮ ಮತ್ತು ಶ್ರೀ ಬಾಲಕೃಷ್ಣಾನಂದ ಮಠ ಮುಂತಾದ ಸಂಸ್ಥೆಗಳಿಗೆ ತಮ್ಮ ಜೀವನ ಮುಡಿಪಿಟ್ಟಿದ್ದರು.
Related Articles
Thank you for your comment. It is awaiting moderation.
Comments (0)