ಪ್ರಾಸಿಕ್ಯೂಷನ್ ಅನುಮತಿ ವಿಚಾರದಲ್ಲಿ ರಾಜ್ಯಪಾಲರು ತನಿಖಾಧಿಕಾರಿಯಂತೆ ವರ್ತಿಸಿದ್ದಾರೆ; ಅಡ್ವೊಕೇಟ್ ಜನರಲ್
- by Jagan Ramesh
- September 9, 2024
- 53 Views
ಬೆಂಗಳೂರು: ಮುಡಾ ಪ್ರಕರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಕ್ಯೂಷನ್‌ಗೆ ಅನುಮತಿ ನೀಡುವ ಮುನ್ನ ರಾಜ್ಯಪಾಲರು ತನಿಖಾಧಿಕಾರಿಯಿಂದ ಪ್ರಾಥಮಿಕ ವಿಚಾರಣಾ ವರದಿ ಪಡೆದಿಲ್ಲ. ಬದಲಿಗೆ ತಾವೇ ತನಿಖಾಧಿಕಾರಿಯ ರೀತಿ ವರ್ತಿಸಿ ಅನುಮತಿ ನೀಡಿದ್ದಾರೆ ಎಂದು ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹೈಕೋರ್ಟ್‌ಗೆ ವಿವರಿಸಿದರು.
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೊರಡಿಸಿರುವ ಆದೇಶ ರದ್ದುಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ಸೋಮವಾರ ವಿಚಾರಣೆ ನಡೆಸಿತು.
ಸರ್ಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17ಎ ಅಡಿ ಪ್ರಾಸಿಕ್ಯೂಷನ್‌ಗೆ ಪೊಲೀಸರು ಅನುಮತಿ ಕೇಳಬಹುದು. ಪ್ರಕರಣದಲ್ಲಿ ರಾಜ್ಯಪಾಲರು ಖಾಸಗಿ ವ್ಯಕ್ತಿಗಳು ನೀಡಿರುವ ದೂರನ್ನು ಆಧರಿಸಿದ್ದಾರೆ. ಆದರೆ, ಖಾಸಗಿ ವ್ಯಕ್ತಿಗಳನ್ನು ಪೊಲೀಸ್ ಅಧಿಕಾರಿಗಿಂತ ಉನ್ನತ ಸ್ಥಾನದಲ್ಲಿಡಲಾಗದು. ಈ ನಿಟ್ಟಿನಲ್ಲಿ ಪ್ರಾಥಮಿಕ ತನಿಖೆ, ವಿಚಾರಣೆ ಅಗತ್ಯವಾಗಿದೆ ಎಂದು ತಿಳಿಸಿದರು.
ದೂರುದಾರರು ಜುಲೈ 18 ಹಾಗೂ 25ರಂದು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಬಳಿಕ ರಾಜ್ಯಪಾಲರಲ್ಲಿ ಪೂರ್ವಾನುಮತಿ ಕೋರಿದ್ದಾರೆ. ಲೋಕಾಯುಕ್ತ ಪೊಲೀಸ್ ಅಧಿಕಾರಿಗೆ ತನಿಖೆ ನಡೆಸಲು ಸೂಕ್ತ ಸಮಯ ನೀಡಿಲ್ಲ. ರಾಜ್ಯಪಾಲರು ದೂರುದಾರರ ವಾದ ಆಲಿಸಿ ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಪೊಲೀಸ್ ಅಧಿಕಾರಿ ಮಾತ್ರ ಅಭಿಪ್ರಾಯ ರೂಪಿಸಬೇಕು. ಹಾಲಿ ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ಇಲ್ಲದೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲರು ಮಾರ್ಗಸೂಚಿ ಉಲ್ಲಂಘಿಸಿದ್ದಾರೆ ಎಂದು ವಿವರಿಸಿದರು.
ರಾಜ್ಯಪಾಲರದ್ದು ವಿವೇಚನಾರಹಿತ ನಡೆ:
ಸಕ್ಷಮ ಪ್ರಾಧಿಕಾರವಾದ ರಾಜ್ಯಪಾಲರು ತನಿಖಾಧಿಕಾರಿಯಿಂದ ಮಾಹಿತಿ ಪಡೆಯಬಹುದಿತ್ತು. ಆದರೆ, ರಾಜ್ಯಪಾಲರೇ ತನಿಖಾಧಿಕಾರಿ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಾಗ ರಾಜ್ಯಪಾಲರು ಪೂರ್ಣ ಪ್ರಮಾಣದಲ್ಲಿ ವಿವೇಚನೆ ಬಳಸಿಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಆದೇಶದಲ್ಲೇ ಸಕಾರಣ ಉಲ್ಲೇಖಿಸಬೇಕಿತ್ತೇ ಹೊರತು ರಾಜ್ಯಪಾಲರ ಕಡತದಲ್ಲಲ್ಲ. ದೂರುದಾರರ ಪ್ರಕಾರ 1998ರಲ್ಲಿ ವಿವಾದಿತ 3.16 ಎಕರೆ ಭೂಮಿ ಡಿನೋಟಿಫಿಕೇಶನ್ ಆಗಿದೆ. ಅದರ ಪ್ರಕಾರ ನೋಡಿದರೆ 22 ವರ್ಷಕ್ಕೂ ಹೆಚ್ಚು ಹಳೆಯ ಪ್ರಕರಣ ಇದಾಗಿದೆ. ಪ್ರಕರಣ ದಾಖಲಿಸುವಲ್ಲಿ ಸುಧೀರ್ಘ ವಿಳಂಬವಾಗಿದೆ ಎಂದು ಆಕ್ಷೇಪಿಸಿದರು.
ಸಿಎಂ ನಿರ್ಧಾರ ಕೈಗೊಂಡಿಲ್ಲ:
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಾಗ ಆರೋಪಿಸಲಾದ ಕೃತ್ಯ ಕರ್ತವ್ಯದ ಭಾಗವಾಗಿತ್ತೇ ಎಂಬುದನ್ನು ಗಮನಿಸಬೇಕು. ಯಡಿಯೂರಪ್ಪ ಅವರ ಪ್ರಕರಣದಲ್ಲಿ ಅವರೇ ಡಿನೋಟಿಫಿಕೇಷನ್‌ಗೆ ನಿರ್ಧಾರ ಕೈಗೊಂಡಿದ್ದರು. ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳು ವಿವಾದಿತ ಜಮೀನಿನ ಡಿನೋಟಿಫಿಕೇಷನ್‌ಗೆ ನಿರ್ಧಾರ ಕೈಗೊಂಡಿಲ್ಲ ಹಾಗೂ ಶಿಫಾರಸು ಮಾಡಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿ ನಿರ್ವಹಿಸಿದ ಕರ್ತವ್ಯದ ಭಾಗವಾಗಿ ಈ ಕೃತ್ಯ ನಡೆದಿಲ್ಲ. ಜತೆಗೆ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದು ಎಂಬ ಸಚಿವ ಸಂಪುಟದ ನಿರ್ಣಯಕ್ಕೆ ತಾವು ಬದ್ಧವಾಗಿಲ್ಲ ಎಂದು ರಾಜ್ಯಪಾಲರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಆದರೆ, ಸಂಪುಟದ ಶಿಫಾರಸು ತಿರಸ್ಕರಿಸುವ ಅನಿಯಂತ್ರಿತ ಅಧಿಕಾರವನ್ನು ರಾಜ್ಯಪಾಲರು ಹೊಂದಿಲ್ಲ. ಆದ್ದರಿಂದ, ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ನೀಡಿರುವ ಆದೇಶ ರದ್ದುಪಡಿಸಬೇಕು ಎಂದು ಕೋರುವ ಮೂಲಕ ಅಡ್ವೊಕೇಟ್ ಜನರಲ್ ವಾದ ಪೂರ್ಣಗೊಳಿಸಿದರು.
ಅಧಿಕಾರದಲ್ಲಿದ್ದಾಗಲೇ ನಡೆದಿರುವ ಚಟುವಟಿಕೆ:
ಅರ್ಜಿಯಲ್ಲಿ 4ನೇ ಪ್ರತಿವಾದಿಯಾಗಿರುವ ಖಾಸಗಿ ದೂರುದಾರ ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸಿದ ಹಿರಿಯ ವಕೀಲೆ ಲಕ್ಷ್ಮೀ ಅಯ್ಯಂಗಾರ್, 1996ರಿಂದ 1999ರ ಅವಧಿಯಲ್ಲಿ ವಿವಾದಿತ ಜಮೀನಿನ ಡಿನೋಟಿಫಿಕೇಷನ್ ನಡೆದಿದೆ. ಈ ಸಮಯದಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. 2004ರಿಂದ 2007ರಲ್ಲಿ ಭೂಪರಿವರ್ತನೆ ಮಾಡಲಾಗಿದೆ. ಆಗಲೂ ಅವರು ಡಿಸಿಎಂ ಆಗಿದ್ದರು. 2013 ರಿಂದ 2018 ನಡುವೆ ಸಿದ್ದರಾಮಯ್ಯ ಪತ್ನಿ ಪರಿಹಾರದ ನಿವೇಶನಗಳಿಗೆ ಅರ್ಜಿ ಸಲ್ಲಿಸಿದ್ದರು. ಆಗ ಸಿದ್ದರಾಮಯ್ಯ ಸಿಎಂ ಆಗಿದ್ದರು ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಸಿದ್ದರಾಮಯ್ಯ ಅವರು 2018ರಿಂದ 2022ವರೆಗೆ ಶಾಸಕರಾಗಿದ್ದರು. ಸರ್ಕಾರಿ ಗೆಸ್ಟ್ ಹೌಸ್‌ನಲ್ಲಿ ಮುಡಾದಿಂದ ಕ್ರಯಪತ್ರ ಮಾಡಿಕೊಡಲಾಗಿದೆ. ಉಪನೋಂದಣಾಧಿಕಾರಿ ಕಚೇರಿಗೆ ಹೋಗದೇ ಕ್ರಯಪತ್ರ ಮಾಡಲಾಗಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಈ ಎಲ್ಲ ಚಟುವಟಿಕೆ ನಡೆದಿದ್ದು, ಇದು ಅಧಿಕಾರ ದುರುಪಯೋಗವಾಗಿದೆ. ಅವರ ಪತ್ನಿಗೆ ಬೇರೆ ಆದಾಯದ ಮೂಲಗಳಿರಲಿಲ್ಲ. ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಿಎಂ ಪತ್ನಿ ಫೈಲ್ ಮಾಡಿಲ್ಲ. ಹಾಗಾಗಿ ಪತ್ನಿಯ ಆಸ್ತಿಯನ್ನು ಪತಿಯ ಆಸ್ತಿ ಎಂದೇ ಪರಿಗಣಿಸಬೇಕಾಗುತ್ತದೆ ಎಂದ ಲಕ್ಷ್ಮೀ ಅಯ್ಯಂಗಾರ್, ಸಿದ್ದರಾಮಯ್ಯ ಮೇಲಿನ ಆರೋಪಗಳಿಗೆ ಪುರಾವೆಗಳಿವೆ ಎಂದು ತಿಳಿಸಿದರು.
ಗುರುವಾರ ವಾದ ಮಂಡಿಸಲಿರುವ ಸಿಂಘ್ವಿ:
ಅಡ್ವೋಕೇಟ್ ಜನರಲ್ ವಾದ ಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಅಂದು ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ರಾಜ್ಯಪಾಲರ ಕಚೇರಿ ಹಾಗೂ ಮೂವರು ಖಾಸಗಿ ದೂರುದಾರರ ಪರ ವಕೀಲರ ಪ್ರತಿವಾದಕ್ಕೆ ಉತ್ತರ ನೀಡಿ ವಾದ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಡಾ.ಅಭಿಷೇಕ್ ಮನುಸಿಂಘ್ವಿ ತಿಳಿಸಿದರು. ಸಿಂಘ್ವಿ ಅವರ ವಾದಕ್ಕೆ ಪ್ರತಿಯಾಗಿ ತಾವು ವಾದ ಮಂಡಿಸುವುದಾಗಿ ಪ್ರತಿವಾದಿಗಳ ಪರ ವಕೀಲರು ತಿಳಿಸಿದರು. ಆಗ ನ್ಯಾಯಪೀಠ, ಹೀಗೇ ವಾದಕ್ಕೆ ಪ್ರತಿವಾದ ಮಂಡಿಸುತ್ತಾ ಹೋದರೆ ವಿಚಾರಣೆ ಮುಗಿಯುವುದಿಲ್ಲ. ಸಿಂಘ್ವಿ ಅವರ ವಾದ ಮಂಡನೆ ನಂತರ ಪ್ರತಿವಾದಿಗಳಿಗೆ ಐದೈದು ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಆ ಸಮಯದೊಳಗೆ ಎಲ್ಲರೂ ವಾದ ಪೂರ್ಣಗೊಳಿಸಬೇಕು ಎಂದು ಸೂಚಿಸಿತು.
Related Articles
Thank you for your comment. It is awaiting moderation.
Comments (0)