ಪ್ರಜ್ವಲ್ ಜಾಮೀನು ಅರ್ಜಿ ವಿಚಾರಣೆ ಸೆ.12ಕ್ಕೆ; ಗೌಪ್ಯ ವಿಚಾರಣೆ ಬಗ್ಗೆ ತೀರ್ಮಾನಿಸಲಾಗುವುದೆಂದ ಹೈಕೋರ್ಟ್

ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣಗಳಲ್ಲಿ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿರುವ ಹೈಕೋರ್ಟ್, ಪ್ರಾಸಿಕ್ಯೂಷನ್ ನೀಡಿರುವ ಆರೋಪ ಪಟ್ಟಿ ಪರಿಶೀಲಿಸಿ, ಅರ್ಜಿಗಳ ಗೌಪ್ಯ ವಿಚಾರಣೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿಗಳಿಂದ ಸೂಕ್ತ ಆದೇಶ ಪಡೆದುಕೊಳ್ಳಲಾಗುವುದು ಎಂದು ಮೌಖಿಕವಾಗಿ ತಿಳಿಸಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಹಾಗೂ ಬೆಂಗಳೂರಿನ ಸಿಐಡಿ ಪೊಲೀಸರು ದಾಖಲಿಸಿರುವ ಮತ್ತೆರಡು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಹಾಜರಾಗಿ, ಹೊಳೆನರಸೀಪುರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ಅದರ ಪ್ರತಿ ನಮ್ಮ ಕೈಸೇರಿಲ್ಲ. ಆದ್ದರಿಂದ, ಆರೋಪ ಪಟ್ಟಿಯನ್ನು ನಮಗೆ ಒದಗಿಸಬೇಕು. ಆರೋಪ ಪಟ್ಟಿ ಬದಿಗಿಟ್ಟು ನೋಡಿದರೆ ಪ್ರಜ್ವಲ್ ವಿರುದ್ದದ ಎಲ್ಲ ಆರೋಪಗಳು ಜಾಮೀನು ನೀಡಬಹುದಾದ ಕೃತ್ಯಕ್ಕೆ ಸಂಬಂಧಿಸಿದ್ದಾಗಿವೆ. ಸಂತ್ರಸ್ತೆಯ ಪ್ರಮಾಣಿಕೃತ ಹೇಳಿಕೆ ಆಧರಿಸಿ, ಈ ಪ್ರಕರಣದಲ್ಲಿ ಅತ್ಯಾಚಾರ ಆರೋಪ ಸೇರ್ಪಡೆ ಮಾಡಲಾಗಿದೆ ಎಂದು ನ್ಯಾಯಪಿಠಕ್ಕೆ ವಿವರಿಸಿದರು.

ಚಾರ್ಜ್‌ಶೀಟ್‌ನಲ್ಲಿವೆ ಆಘಾತಕಾರಿ ಅಂಶಗಳು:
ವಿಶೇಷ ತನಿಖಾ ದಳದ (ಎಸ್‌ಐಟಿ) ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ವಾದ ಮಂಡಿಸಿ, ಅರ್ಜಿದಾರರು ವಿಚಾರಣಾ ನ್ಯಾಯಾಲಯದಿಂದ ಆರೋಪ ಪಟ್ಟಿ ಪಡೆದುಕೊಳ್ಳಬಹುದು. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್.ಡಿ .ರೇವಣ್ಣ ಮತ್ತು ಮಾಜಿ ಸಂಸದ ಪ್ರಜ್ವಲ್ ಕ್ರಮವಾಗಿ
ಮೊದಲ ಮತ್ತು ಎರಡನೇ ಆರೋಪಿಯಾಗಿದ್ದಾರೆ. ರೇವಣ್ಣ ವಿರುದ್ಧ ಕಾಗ್ನಿಜೆನ್ಸ್‌ ತೆಗೆದುಕೊಳ್ಳದಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್‌ ಈಗಾಗಲೇ ನಿರ್ಬಂಧ ವಿಧಿಸಿದೆ. ಇದೇ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಪ್ರಜ್ವಲ್ ವಿರುದ್ಧದ ಆರೋಪಗಳು ಪ್ರತ್ಯೇಕ ಮತ್ತು ವಿಭಿನ್ನವಾಗಿವೆ. ಆರೋಪ ಪಟ್ಟಿ ಪರಿಶೀಲಿಸಿದರೆ, ಅವುಗಳಲ್ಲಿನ ಅಂಶಗಳು ಆಘಾತಕಾರಿಯಾಗಿವೆ. ಇನ್ನು ಸಂತ್ರಸ್ತರ ಗೌರವದ ದೃಷ್ಟಿಯಿಂದ ಪ್ರಕರಣವನ್ನು ಗೌಪ್ಯ ವಿಚಾರಣೆ ನಡೆಸಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ಅನುಮತಿ ಪಡದು ತನಿಖಾಧಿಕಾರಿ ಅತ್ಯಾಚಾರ ಆರೋಪ ಸೇರ್ಪಡೆ ಮಾಡಿದ್ದಾರೆ. ನ್ಯಾಯಾಲಯ ಕಾಗ್ನಿಜೆನ್ಸ್‌ ತೆಗೆದುಕೊಂಡ ಬಳಿಕ ಪ್ರಜ್ವಲ್‌ಗೆ ಆರೋಪ ಪಟ್ಟಿ ಲಭ್ಯವಾಗಲಿದೆ. ಪ್ರಕರಣದಲ್ಲಿ ಮೊದಲ ಆರೋಪಿ ರೇವಣ್ಣ ಅವರ ವಿರುದ್ಧ ಕಾಗ್ನಿಜೆನ್ಸ್‌ ತೆಗೆದುಕೊಳ್ಳದಿರಲು ಹೈಕೋರ್ಟ್‌ ಆದೇಶಿಸಿದೆ. ಪ್ರಜ್ವಲ್‌ ವಿಚಾರದಲ್ಲಿಯೂ ಈ ಬಗ್ಗೆ ಸ್ಪಷ್ಟನೆ ನೀಡಲಾಗುವುದು. ಇನ್ನೂ ಗೌಪ್ಯ ವಿಚಾರಣೆಗೆ ಸಂಬಂಧಿಸಿದಂತೆ ಆರೋಪ ಪಟ್ಟಿ ಪರಿಶೀಲಿಸಿ, ಮುಖ್ಯ ನ್ಯಾಯಮೂರ್ತಿಗಳಿಂದ ಸೂಕ್ತ ಆದೇಶ ಪಡೆದುಕೊಳ್ಳಲಾಗುವುದು ಎಂದು ತಿಳಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿತು.

Related Articles

Comments (0)

Leave a Comment