ನ್ಯಾಯಾಲಯಗಳಿರುವುದು ವ್ಯಾಪಾರ ಮಾಡಲಿಕ್ಕಲ್ಲ, ನ್ಯಾಯ ಕೇವಲ ಶ್ರೀಮಂತರಿಗಲ್ಲ – ಹೈಕೋರ್ಟ್
- by Legal Samachar Desk
- September 9, 2024
- 437 Views
ಬೆಂಗಳೂರು/ಧಾರವಾಡ: ನ್ಯಾಯಾಲಯಗಳ ಮೂಲ ಉದ್ದೇಶ ಬಡವರು, ಕೃಷಿಕರು, ಶ್ರಮಿಕರನ್ನು ರಕ್ಷಣೆ ಮಾಡುವುದೇ ವಿನಃ ವ್ಯಾಪಾರ ಮಾಡಲಿಕ್ಕೆ ಅಲ್ಲ ಎಂದು ಹೈಕೋರ್ಟ್ ಮಾರ್ಮಿಕವಾಗಿ ನುಡಿದಿದೆ.
ಬೆಳಗಾವಿಯ ಶ್ರೀ ದೂಧ್ಗಂಗಾ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತದ ವಾಹನ ವಿಭಾಗದ ನೌಕರರಿಗೆ ಪರಿಹಾರ ಪಾವತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಖಾನೆ ಸಲ್ಲಿಸಿರುವ ಮೇಲ್ಮನವಿಯನ್ನು ಇತ್ತೀಚೆಗೆ ಧಾರವಾಡದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ವಿಜಯ್ ಕುಮಾರ್ ಎ. ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮೇಲ್ಮನವಿ ಕುರಿತು ಕೆಲಕಾಲ ವಾದ ಆಲಿಸಿದ ಪೀಠ, ಪರಿಹಾರದ ರೂಪದಲ್ಲಿ ನಿಮಗೆ ಎಷ್ಟು ಹಣ ಬೇಕು ಎಂಬುದನ್ನು ಚೀಟಿಯಲ್ಲಿ ಬರೆದುಕೊಡಿ ಎಂದು ನೌಕರರ ಪರ ವಕೀಲರಿಗೆ ಸೂಚಿಸಿತು. ಬಳಿಕ, ಅವರು ಬರೆದುಕೊಟ್ಟ ಹಣದ ಮೊತ್ತ ಗಮನಿಸಿದ ನ್ಯಾಯಪೀಠ, ಕೋರ್ಟ್ಗಳು ಇರುವುದು ವ್ಯಾಪಾರ ಮಾಡಲಿಕ್ಕೆ ಅಲ್ಲ. ನೀವು ಕೇಳುತ್ತಿರುವ ಪರಿಹಾರದ ಮೊತ್ತ ಸಮಂಜಸವಾದ ಬೆಲೆ ಹೊಂದಿರಬೇಕು. ಈಗ ನೀವು ಕೇಳಿರುವ ಪರಿಹಾರದ ಮೊತ್ತವನ್ನು ಗಮನಿಸಿದರೆ ನಿಮ್ಮ ಗಣಿತ ಜ್ಞಾನ ಬಗ್ಗೆ ಅನುಮಾನ ಮೂಡುತ್ತದೆ ಎಂದು ಹೇಳಿತು.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪ್ರಕರಣದ ನಂತರ ಕರ್ನಾಟಕ ಹೈಕೋರ್ಟ್ನವರಿಗೆ ಅಂಕಗಣಿತದ ಜ್ಞಾನವೇ ಇಲ್ಲ ಎಂಬ ದೊಡ್ಡ ಅಪವಾದ ಕೇಳಿ ಬಂದಿತ್ತು. ಈ ರೀತಿ ಮನಸೋ ಇಚ್ಚೆಯ ಪರಿಹಾರ ಕೇಳದೆ ನ್ಯಾಯಸಮ್ಮತವಾದ ಪರಿಹಾರಕ್ಕೆ ಬೇಡಿಕೆ ಇಡಿ. ನೀವು ಕೇಳುವ ಪರಿಹಾರದಿಂದ ಕಾರ್ಖಾನೆಗಳು ಕಾರ್ಯ ನಿರ್ವಹಿಸುವಂತೆ ಇರಬೇಕೇ ಹೊರತು ಬೀಗಮುದ್ರೆ ಹಾಕುವಂತಾಗಬಾರದು. ಇದರಿಂದ, ಬೇರೆ ಉದ್ಯೋಗಿಗಳ ಕೆಲಸಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿತು.
ರಾಜಕಾರಣಿಗಳ ಮೂಗಿನಡಿಯಲ್ಲೇ ಕಾರ್ಯ:
ಬಹುತೇಕ ಸಹಕಾರಿ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಮೂಗಿನ ಅಡಿಯಲ್ಲೇ ಕಾರ್ಯ ನಿರ್ವಹಿಸುತ್ತವೆ. ಅಲ್ಲಿ ಕೆಲಸ ಮಾಡುವ ನೌಕರರು ಸಂಸ್ಥೆಯ ನಿರ್ದೇಶಕರ ಬಳಿ ತಮ್ಮ ಅಳಲು ತೋಡಿಕೊಳ್ಳಲಿಕ್ಕೂ ಆಗುವುದಿಲ್ಲ. ಅವರನ್ನು ನಿಲ್ಲಿಸಿ ಮಾತನಾಡುವಷ್ಟು ಸೌಜನ್ಯ ಕೂಡಾ ಅವರಲ್ಲಿ ಉಳಿದಿಲ್ಲ ಎಂದು ವಿಚಾರಣೆ ವೇಳೆ ಹೈಕೋರ್ಟ್ ವಿಷಾದ ವ್ಯಕ್ತಪಡಿಸಿತು.
ನೌಕರರು 1981 ರಿಂದಲೂ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಪರಿಹಾರವನ್ನೂ ನೀಡದೆ ಏಕಾಏಕಿ ಅವರನ್ನು ಕೆಲಸದಿಂದ ವಜಾ ಮಾಡಿದರೆ ಹೇಗೆ? ಈ ಹಂತದಲ್ಲಿ ಕೋರ್ಟ್ಗಳು ಅವರ ರಕ್ಷಣೆಗೆ ಮುಂದಾಗದಿದ್ದರೆ ಜನರು ನ್ಯಾಯಾಲಯಗಳ ಮೇಲಿಟ್ಟಿರುವ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ. ಕೋರ್ಟ್ಗಳು ಕೇವಲ ಹಣವಂತರಿಗೆ ಮಾತ್ರ ಎಂಬ ಭಾವನೆ ಮೂಡಿದರೆ ಅದು ನ್ಯಾಯಾಲಯದ ಘನತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಪೀಠ ನುಡಿಯಿತು.
ವಕೀಲರಿಗೆ ಕೊರ್ಟ್ ಕಿವಿಮಾತು:
ಸಮಾಜವಾದ ಎಂಬ ಪದವನ್ನು ನಮ್ಮ ಸಂವಿಧಾನದ ತಿದ್ದುಪಡಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಇದರ ಮೂಲ ಉದ್ದೇಶ ಕಾರ್ಮಿಕರು, ಶ್ರಮಿಕರು, ಬಡವರು ಹಾಗೂ ಕೃಷಿಕರನ್ನು ರಕ್ಷಣೆ ಮಾಡುವುದೇ ವಿನಃ ಉಳ್ಳವರ ರಕ್ಷಣೆಗೆ ಅಲ್ಲ. ಬಡವರಾದವರು ಒಂದು ದಿನ ಕೆಲಸ ಬಿಟ್ಟು ಬಂದರೆ ಎರಡು ದಿನ ಉಪವಾಸ ಇರಬೇಕಾದ ಪರಿಸ್ಥಿತಿ ಇದೆ. ತಿಳಿದವರಾದ ನೀವು ಇದನ್ನು ಅರಿಯಬೇಕೆ ಹೊರತು ನಿಮ್ಮ ಕಕ್ಷಿದಾರರ ಮುಖವಾಣಿ ಆಗಬಾರದು ಎಂದು ಮೇಲ್ಮನವಿದಾರರ ಪರ ವಕೀಲರಿಗೆ ಕಿವಿಮಾತು ಹೇಳಿತು.
ನೀವೊಬ್ಬ ಕೌನ್ಸಿಲ್. ಕೌನ್ಸಿಲ್ ಎಂದರೆ ಸಂಸ್ಕೃತದಲ್ಲಿ ಅಧಿವಕ್ತಾ ಅಧಿನಿಯಮ. ಅಧಿವಕ್ತ ಎಂದರೆ ಒಳ್ಳೆಯ ವಿಚಾರವನ್ನು ದೇವಗಣಕ್ಕೆ ಹೇಳುವವನು ಎಂದರ್ಥ. ವೇದದ ಕಾಲದಲ್ಲಿ ದೇವಗಣದ ಮುಂದೆ ಅಧಿವಕ್ತನು ನಾಚುತ್ತಾ-ನಲಿಯುತ್ತಾ ಪಂಚಮದಲ್ಲಿ ಹೀಗೆ ವಾದ ಮಂಡಿಸಿದನು ಎಂದು ಸಂಸ್ಕೃತದ ಶ್ಲೋಕದಲ್ಲಿ ತಿಳಿಸಲಾಗಿದೆ. ಆದಕಾರಣ ಈ ಪ್ರಕರಣದಲ್ಲಿ ನಾವು-ನೀವೆಲ್ಲರೂ ಹೃದಯದ ಮಾತು ಕೇಳಬೇಕೇ ಹೊರತು ಮಿದುಳಿನದ್ದಲ್ಲ ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅಭಿಪ್ರಾಯಪಟ್ಟರು.
ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ಮುಂದೂಡಲಾಗಿದೆ.
ಎರಡು ದಶಕಗಳ ವ್ಯಾಜ್ಯ:
ಶ್ರೀ ದೂಧ್ಗಂಗಾ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ವಾಹನ ವಿಭಾಗದಲ್ಲಿ 30 ನೌಕರರು ಕೆಲಸ ಮಾಡುತ್ತಿದ್ದರು. ಆದರೆ, ವಾಹನಗಳ ನಿರ್ವಹಣಾ ವೆಚ್ಚ ಸೇರಿ ಪ್ರತಿದಿನ 18,717 ರೂ. ಗಳಂತೆ ವಾರ್ಷಿಕ 66,41,135 ರೂ. ನಷ್ಟ ಉಂಟಾಗುತ್ತಿದೆ ಎಂಬ ಕಾರಣಕ್ಕೆ ವಾಹನ ವಿಭಾಗವನ್ನೇ ವಿಸರ್ಜಿಸಿ, 30 ನೌಕರರಿಗೆ ಅವರ ಸೇವಾ ಅನುಭವದ ಆಧಾರದಲ್ಲಿ ಪರಿಹಾರ ಹಾಗೂ ಇತರ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸಿ ಸೇವೆಯಿಂದ ಬಿಡುಗಡೆಗೊಳಿಸಲಾಗಿತ್ತು.
ಆದರೆ, 30 ನೌಕರರಲ್ಲಿ 13 ನೌಕರರು ಕಾರ್ಖಾನೆಯ ಕ್ರಮವನ್ನು ಸಹಕಾರ ಸಂಘಗಳ ಜಂಟಿ ರಿಜಿಸ್ಟ್ರಾರ್ ಮುಂದೆ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ್ದ ರಿಜಿಸ್ಟ್ರಾರ್, ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಿ ಕಾರ್ಖಾನೆ ಹೊರಡಿಸಿದ್ದ ಆದೇಶ ರದ್ದುಪಡಿಸುವ ಜತೆಗೆ, ನೌಕರರನ್ನು ಅವರು ಮೊದಲಿದ್ದ ಹುದ್ದೆಗೆ ಮರುನೇಮಕ ಮಾಡುವಂತೆ ಹಾಗೂ ಅವರಿಗೆ ಹಿಂಬಾಕಿ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸುವಂತೆ 2004ರಲ್ಲಿ ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಸಕ್ಕರೆ ಕಾರ್ಖಾನೆ ಕರ್ನಾಟಕ ಮೇಲ್ಮನವಿ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಿತ್ತು. ಜಂಟಿ ರಿಜಿಸ್ಟ್ರಾರ್ ಆದೇಶವನ್ನು ಎತ್ತಿಹಿಡಿದಿದ್ದ ಪ್ರಾಧಿಕಾರ, ಸಕ್ಕರೆ ಕಾರ್ಖಾನೆಯ ಮೇಲ್ಮನವಿ ವಜಾಗೊಳಿಸಿ 2011ರಲ್ಲಿ ಆದೇಶ ಹೊರಡಿಸಿತ್ತು.
ಮೇಲ್ಮನವಿ ಪ್ರಾಧಿಕಾರದ ಆದೇಶದ ವಿರುದ್ಧ ಸಕ್ಕರೆ ಕಾರ್ಖಾನೆ 2012ರಲ್ಲಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಸುದೀರ್ಘ ವಿಚಾರಣೆಯ ಬಳಿಕ 2023ರ ಮಾರ್ಚ್ 6ರಂದು ಕಾರ್ಖಾನೆಯ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು. ಇದರಿಂದ, ಮತ್ತೆ ಕಾನೂನು ಹೋರಾಟಕ್ಕೆ ಮುಂದಾಗಿರುವ ಸಕ್ಕರೆ ಕಾರ್ಖಾನೆ, ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದೆ.
Related Articles
Thank you for your comment. It is awaiting moderation.
Comments (0)