ಸೆಣಬಿನ ಚೀಲದಲ್ಲಿ ಸಕ್ಕರೆ ಪ್ಯಾಕಿಂಗ್; ಕೇಂದ್ರದ ಅಧಿಸೂಚನೆಗೆ ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್
- by Legal Samachar Desk
- September 7, 2024
- 31 Views
ಬೆಂಗಳೂರು: ಸಕ್ಕರೆಯ ಒಟ್ಟು ಉತ್ಪಾದನೆಯಲ್ಲಿ ಶೇ.20 ಪ್ರಮಾಣವನ್ನು ಕಡ್ಡಾಯವಾಗಿ ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಸೆಣಬಿನ ಚೀಲಗಳಲ್ಲಿ ಪ್ಯಾಕ್ ಮಾಡಬೇಕೆಂಬ ಕೇಂದ್ರ ಸರ್ಕಾರದ ಅಧಿಸೂಚನೆಗೆ ಹೈಕೋರ್ಟ್ ತಾತ್ಕಾಲಿಕವಾಗಿ ತಡೆ ನೀಡಿದೆ.
ಜವಳಿ ಸಚಿವಾಲಯ 2023ರ ಡಿಸೆಂಬರ್ 26 ಹಾಗೂ 2024ರ ಜೂನ್ 28ರಂದು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಸೌತ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್-ಕರ್ನಾಟಕ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ಕೇಂದ್ರದ ಅಧಿಸೂಚನೆಗೆ ತಡೆ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿ, ಸೆಣಬಿನ ಚೀಲಗಳಲ್ಲಿ ಸಕ್ಕರೆ ಪ್ಯಾಕೇಜಿಂಗ್‌ಗೆ 2022ರ ಜುಲೈ 21ರಂದು ನಡೆದ ಸ್ಥಾಯಿ ಸಲಹಾ ಸಮಿತಿಯ ಸಭೆಯಲ್ಲಿ ವಿನಾಯಿತಿ ನೀಡಲಾಗಿದೆ. ಸೆಣಬಿನ ಚೀಲ ತಯಾರಿಕೆಯಲ್ಲಿ ಬಳಸಲಾಗುವ ಎಣ್ಣೆೆಯು ಟ್ರೋಮೋಜನಿಕ್ (ಗಡ್ಡೆಜನಕ) ಎಂದು ಕೈಗಾರಿಕಾ ವಿಷಶಾಸ್ತ್ರ ಸಂಶೋಧನಾ ಕೇಂದ್ರ ಅಭಿಪ್ರಾಯಪಟ್ಟಿದೆ. ಸೆಣಬಿನ ಚೀಲಗಳಲ್ಲಿ ಪ್ಯಾಕಿಂಗ್ ಮಾಡುವುದರಿಂದ ಸಕ್ಕರೆಯ ಗುಣಮಟ್ಟ ಹಾಳಾಗುವುದಲ್ಲದೆ ಅದು ಕಲುಷಿತಗೊಳ್ಳುತ್ತದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಹಾಯಕ ಸಾಲಿಸಿಟರ್ ಜನರಲ್ ಅರವಿಂದ ಕಾಮತ್, ಸೆಣಬಿನ ಚೀಲಗಳಲ್ಲಿ ಸಕ್ಕರೆ ಪ್ಯಾಕಿಂಗ್ ಮಾಡುವ ಸಂಬಂಧ ಸೆಣಬಿನ ಪ್ಯಾಕೇಜಿಂಗ್ ವಸ್ತುಗಳ (ಸರಕುಗಳಲ್ಲಿ ಕಡ್ಡಾಯ ಬಳಕೆ ) ಕಾಯ್ದೆ-1987ರ ಸೆಕ್ಷನ್ 3ರ ಪ್ರಕಾರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸೆಣಬಿನ ಕಚ್ಚಾ ಪದಾರ್ಥಗಳ ಉತ್ಪನ್ನ ಹಾಗೂ ಸೆಣಬಿನ ಪ್ಯಾಕೇಜಿಂಗ್‌ಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. 1 ಕ್ವಿಂಟಾಲ್ ಮೇಲ್ಪಟ್ಟ ಸಗಟು ಪ್ಯಾಕೇಜಿಂಗ್ ಹಾಗೂ ರಫ್ತಿಗೆ ಈ ಮಿತಿ ಅನ್ವಯವಾಗುವುದಿಲ್ಲ. ಕೇವಲ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ವಿತರಣೆಗಷ್ಟೇ ಅನ್ವಯವಾಗಲಿದೆ ಎಂದು ತಿಳಿಸಿದರು.
ಅರ್ಜಿದಾರರ ಮನವಿ ಏನು?
ಉತ್ಪಾದನೆಯಾಗುವ ಸಕ್ಕರೆಯ ಒಟ್ಟು ಪ್ರಮಾಣದಲ್ಲಿ ಶೇ.20ರಷ್ಟನ್ನು ಕಡ್ಡಾಯವಾಗಿ ಭಾರತದ ಸೆಣಬಿನ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಸೆಣಬಿನ ಚೀಲಗಳಲ್ಲಿ ಪ್ಯಾಕ್ ಮಾಡಬೇಕು ಎಂದು ಜವಳಿ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. 2014ರ ರಂಗರಾಜನ್ ಸಮಿತಿಯ ಶಿಫಾರಸು, ಆರ್ಥಿಕ ಸಚಿವಾಲಯ, ಆಹಾರ ಸಚಿವಾಲಯ, ರಾಸಾಯನಿಕ ರಸಗೊಬ್ಬರ ಸಚಿವಾಲಯ, ಭಾರತೀಯ ಸ್ಪರ್ಧಾ ಆಯೋಗದ ಶಿಫಾರಸ್ಸಿನಂತೆ ಸಕ್ಕರೆಯನ್ನು ಸೆಣಬಿನ ಪ್ಯಾಕೇಜಿಂಗ್ ವಸ್ತುಗಳ (ಸರಕುಗಳಲ್ಲಿ ಕಡ್ಡಾಯ ಬಳಕೆ) ಕಾಯ್ದೆ-1987ರ (ಜೆಪಿಎಂಎ) ವ್ಯಾಪ್ತಿಯಿಂದ ಹೊರಗಿಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
Related Articles
Thank you for your comment. It is awaiting moderation.
Comments (0)