- ಟ್ರಯಲ್ ಕೋರ್ಟ್
- ಪ್ರಮುಖ ಸಮಾಚಾರಗಳು
- ಹೈಕೋರ್ಟ್
- Like this post: 25
ವಕೀಲರ ವಾಹನಗಳಿಗೆ ಎಚ್ಎಸ್ಆರ್ಪಿ ನೋಂದಣಿ ಅಭಿಯಾನ; ಹೈಕೋರ್ಟ್ ನ್ಯಾ.ಕೆ. ಸೋಮಶೇಖರ್ ಚಾಲನೆ
- by Jagan Ramesh
- September 5, 2024
- 434 Views
ಬೆಂಗಳೂರು: ರಾಜ್ಯದ ಎಲ್ಲ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್ಎಸ್ಆರ್ಪಿ) ಅವಳಡಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ನಗರದ ವಕೀಲರಿಗಾಗಿ ಎಚ್ಎಸ್ಆರ್ಪಿ ನೋಂದಣಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಗುರುವಾರ ಬೆಳಗ್ಗೆ 10 ಗಂಟೆಗೆ ಹೈಕೋರ್ಟ್ನ ವಕೀಲರ ಸಂಭಾಂಗಣ-2ರಲ್ಲಿ ನಡೆದ ಸಮಾರಂಭದಲ್ಲಿ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರು ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದರು. ಬೆಂಗಳೂರು ವಕೀಲರ ಸಂಘದ ಮನವಿ ಮೇರೆಗೆ ರಾಜ್ಯ ಸಾರಿಗೆ ಇಲಾಖೆ ವಿಶೇಷ ಅಭಿಯಾನ ಕೈಗೊಂಡಿದ್ದು, ಅದಕ್ಕಾಗಿ ಹೈಕೋರ್ಟ್ನಲ್ಲಿರುವ ವಕೀಲರ ಸಂಘದ ಸಂಭಾಗಣ-2 ಹಾಗೂ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಪ್ರೊ. ಎ.ಲಕ್ಷ್ಮೀಸಾಗರ್ ಸಭಾಂಗಣದಲ್ಲಿ ವಿಶೇಷ ಕೌಂಟರ್ಗಳನ್ನು ತೆರೆಯಲಾಗಿದೆ.
ಸೆಪ್ಟೆಂಬರ್ 5ರಿಂದ (ಗುರುವಾರ) 30ರವೆರೆಗೆ ನಡೆಯಲಿರುವ ಈ ಅಭಿಯಾನದಲ್ಲಿ ವಕೀಲರು ಹಾಗೂ ಅವರ ಕುಟುಂಬ ಸದಸ್ಯರ ವಾಹನಗಳಿಗೆ ಎಚ್ಎಸ್ಆರ್ಪಿ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತದೆ. ವಕೀಲರು ತಮ್ಮ ವಾಹನದ ನೋಂದಣಿ ಪ್ರಮಾಣಪತ್ರದ (ಆರ್ಸಿ ಬುಕ್ ಅಥವಾ ಆರ್ಸಿ ಸ್ಮಾರ್ಟ್ ಕಾರ್ಡ್) ಮೂಲ ಪ್ರತಿಯನ್ನು ತಂದು ಎಚ್ಎಸ್ಆರ್ಪಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ರಾಜ್ಯ ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಸಾರಿಗೆ ಆಯುಕ್ತ ಎ.ಎಂ. ಯೋಗೀಶ್, ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ್, ಜಂಟಿ ಆಯುಕ್ತೆ ಶೋಭಾ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಉಪಾಧ್ಯಕ್ಷ ಎಂ.ಚಾಮರಾಜ್, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ, ಜಂಟಿ ಕಾರ್ಯದರ್ಶಿ ಚಂದ್ರಕಾಂತ್ ಪಾಟೀಲ್, ಖಜಾಂಚಿ ಎಂ.ಟಿ. ಹರೀಶ್, ಹೈಕೋರ್ಟ್ ಘಟಕದ ಕಾರ್ಯಕಾರಿ ಸಮಿತಿ ಸದಸ್ಯೆ ವಿ. ಹೇಮಲತಾ ಮತ್ತಿತರರು ಉಪಸ್ಥಿತರಿದ್ದರು.
ಎಚ್ಎಸ್ಆರ್ಪಿ ನೋಂದಣಿ ಅಭಿಯಾನದ ಕುರಿತು ಲೀಗಲ್ ಸಮಾಚಾರ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಆರಂಭಿಕ ಹಂತದಲ್ಲಿ ಹೈಕೋರ್ಟ್ ಹಾಗೂ ಸಿಟಿ ಸಿವಿಲ್ ಕೋರ್ಟ್ನಲ್ಲಿ ಈ ಅಭಿಯಾನ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಮ್ಯಾಜಿಸ್ಟ್ರೇಟ್ ಮತ್ತು ಮೇಯೋಹಾಲ್ ಘಟಕಗಳಿಗೂ ವಿಸ್ತರಿಸಲಾಗುವುದು. ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದೇ ವೇಳೆ, ವಕೀಲರ ಅನುಕೂಲಕ್ಕಾಗಿ ವಿಶೇಷ ಅಭಿಯಾನ ಹಮ್ಮಿಕೊಂಡಿರುವ ಸಾರಿಗೆ ಇಲಾಖೆ ಮತ್ತದರ ಅಧಿಕಾರಿಗಳ ಸಹಕಾರಕ್ಕೆ ಬೆಂಗಳೂರು ವಕೀಲರ ಸಂಘದ ವತಿಯಿಂದ ಧನ್ಯವಾದ ಅರ್ಪಿಸಿದರು.
ಅಭಿಯಾನಕ್ಕೆ ಉತ್ತಮ ಸ್ಪಂದನೆ:
ವಿಶೇಷ ಅಭಿಯಾನದ ಮೊದಲ ದಿನವಾದ ಗುರುವಾರ ಹೈಕೋರ್ಟ್ ಹಾಗೂ ಸಿಟಿ ಸಿವಿಲ್ ಕೋರ್ಟ್ನಲ್ಲಿ 300ಕ್ಕೂ ಅಧಿಕ ವಕೀಲರು ಎಚ್ಎಸ್ಆರ್ಪಿ ಅಳವಡಿಕೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಶುಕ್ರವಾರ ಹಾಗೂ ಶನಿವಾರ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೋರ್ಟ್ಗಳಿಗೆ ರಜೆ ಇರುವ ಕಾರಣ ಸೋಮವಾರ ಮತ್ತೆ ಅಭಿಯಾನ ಮುಂದುವರಿಯಲಿದೆ ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜಿ. ರವಿ ಮಾಹಿತಿ ನೀಡಿದ್ದಾರೆ.
Related Articles
Thank you for your comment. It is awaiting moderation.
Comments (0)