ಮಕ್ಕಳ ಪೋರ್ನ್ ವಿಡಿಯೊ ವೀಕ್ಷಿಸಿದ್ದಕ್ಕೆ ಬಿತ್ತು ಕ್ರಿಮಿನಲ್ ಕೇಸ್; ಯುವಕನಿಗೆದುರಾಯ್ತು ಕಾನೂನು ಸಂಕಷ್ಟ
- by Jagan Ramesh
- September 5, 2024
- 454 Views
ಬೆಂಗಳೂರು: ಯಾರಿಗೂ ತಿಳಿಯುವುದಿಲ್ಲವೆಂಬ ಭ್ರಮೆಯಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ಗಳ ಮೂಲಕ ಅಂತರ್ಜಾಲದಲ್ಲಿ ಮಕ್ಕಳ ಅಶ್ಲೀಲ ದೃಶ್ಯಗಳನ್ನು (ಪೋರ್ನ್) ನೋಡುವ ಗೀಳು ಹತ್ತಿಸಿಕೊಂಡಿರುವವರು ಇನ್ನು ಮುಂದೆ ಎಚ್ಚೆತ್ತುಕೊಳ್ಳದ್ದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಾಗುವುದು ಖಚಿತ.
ಮಕ್ಕಳ ಅಶ್ಲೀಲ ದೃಶ್ಯ ವೀಕ್ಷಣೆ ಸೇರಿದಂತೆ ಲೈಂಗಿಕ ಅಪರಾಧಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ, ಅದಕ್ಕಾಗಿಯೇ ವೆಬ್ ಪೋರ್ಟಲ್ಗಳನ್ನು ರೂಪಿಸಿದೆ. ಈ ವೆಬ್ ಪೋರ್ಟಲ್ಗಳು ಅಂತರ್ಜಾಲದಲ್ಲಿ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಹಾಗೂ ಹಂಚಿಕೆ ಮಾಡುವವರನ್ನು ಪತ್ತೆ ಹಚ್ಚಿ ಸ್ಥಳೀಯ ಸಿಇಎನ್ (ಸೈಬರ್ ಕ್ರೈಂ, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ ತನಿಖಾ ವಿಭಾಗ) ಪೊಲೀಸರಿಗೆ ಮಾಹಿತಿ ನೀಡಿ, ಕ್ರಿಮಿನಲ್ ಪ್ರಕರಣ ದಾಖಲಿಸಲು ಸೂಚಿಸುತ್ತವೆ.
ಇಂಥದೇ ಪ್ರಕಣವೊಂದರಲ್ಲಿ 24 ವರ್ಷದ ಯುವಕನೊಬ್ಬ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಿಸಿದ್ದಲ್ಲದೇ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಕಾನೂನು ಸಂಕಷ್ಟಕ್ಕೆ ಒಳಗಾಗಿದ್ದಾನೆ. ಮತ್ತೊಂದೆಡೆ, ಹೈಕೋರ್ಟ್ ಆತನಿಗೆ ಷರತ್ತುಬದ್ಧ ಜಾಮೀನು ನೀಡಿದ್ದರೂ, ಪೊಲೀಸರು ಹಾಗೂ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿ ತನಿಖೆ ಎದುರಿಸುವಂತೆ ಆದೇಶಿಸಿದೆ. ಅಲ್ಲದೆ, ಇದೇ ಮಾದರಿಯ ಅಪರಾಧ ಕೃತ್ಯದಲ್ಲಿ ಮತ್ತೆಂದೂ ಭಾಗಿಯಾಗದಂತೆ ಎಚ್ಚರಿಕೆಯನ್ನೂ ನೀಡಿದೆ.
ಮಕ್ಕಳ ಪೋರ್ನ್ ವಿಡಿಯೊ ಅಪ್ಲೋಡ್:
ಅಪ್ರಾಪ್ತ ವಯಸ್ಸಿನ ಮಕ್ಕಳ ಅಶ್ಲೀಲ ಚಿತ್ರ ವೀಕ್ಷಿಸಿದ ಹಾಗೂ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿದ ಆರೋಪದಲ್ಲಿ ಅರ್ಜಿದಾರ ಯುವಕನ ವಿರುದ್ಧ 2023ರ ಸೆಪ್ಟೆಂಬರ್ 23ರಂದು ರಾಮನಗರ ಸಿಇಎನ್ ಅಪರಾಧಗಳ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಆರೋಪಿ ಯುವಕ ರಾಮನಗರ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ 2024ರ ಆಗಸ್ಟ್ 3ರಂದು ವಜಾಗೊಳಿಸಿತ್ತು. ಇದರಿಂದ, ಆತ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ.
ಹೈಕೋರ್ಟ್ ಆದೇಶದಲ್ಲೇನಿದೆ?
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಲೈಂಗಿಕ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲ ವೆಬ್ ಪೋರ್ಟಲ್ಗಳನ್ನು ರೂಪಿಸಿದೆ. ಅದರಂತೆ, ರಾಷ್ಟ್ರೀಯ ಸೈಬರ್ ಪೋರ್ಟಲ್/ರಾಷ್ಟ್ರೀಯ ನಾಪತ್ತೆಯಾಗಿರುವ ಹಾಗೂ ಶೋಷಿತ ಮಕ್ಕಳ ಕೇಂದ್ರ ನೀಡಿದ ಮಾಹಿತಿ ಆಧರಿಸಿ, ಪ್ರಾಥಮಿಕ ವಿಚಾರಣೆ ನಡೆಸಿದಾಗ ಅರ್ಜಿದಾರ ಯುವಕ ಆನ್ಲೈನ್ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದ. ಜತೆಗೆ, ಆ ವಿಡಿಯೊಗಳನ್ನು ತನ್ನ ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದನೆಂಬ ಆರೋಪವಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.
ಆರೋಪಿ ಎಸಗಿದ್ದಾನೆ ಎನ್ನಲಾದ ಅಪರಾಧ ಕೃತ್ಯಕ್ಕೆ ಗರಿಷ್ಠ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ. 24 ವರ್ಷದ ಅರ್ಜಿದಾರ ಯಾವುದೇ ಅಪರಾಧಿಕ ಹಿನ್ನೆಲೆ ಹೊಂದಿಲ್ಲ. ಪೊಲೀಸರ ಮುಂದೆ ಹಾಜರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ನ್ಯಾಯಾಲಯದ ಮುಂದೆ ಮುಚ್ಚಳಿಕೆ ನೀಡಿದ್ದಾನೆ. ಆದ್ದರಿಂದ, ಆತನಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಪೊಲೀಸರ ಮುಂದೆ ಹಾಜರಾಗಲು ಸೂಚನೆ:
ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ರಾಮನಗರ ಸಿಇಎನ್ ಠಾಣೆ ಅಥವಾ ಕರ್ನಾಟಕದ ಯಾವುದೇ ಠಾಣೆಯ ಪೊಲೀಸರು ಅರ್ಜಿದಾರನನ್ನು ಬಂಧಿಸಿದ ಸಂದರ್ಭದಲ್ಲಿ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಅರ್ಜಿದಾರ ಸೆಪ್ಟೆಂಬರ್ 9ರಂದು ಬೆಳಗ್ಗೆ 10.30ಕ್ಕೆ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ವಿಚಾರಣೆಯ ಉದ್ದೇಶಕ್ಕಾಗಿ ಆತನನ್ನು ವಶಕ್ಕೆ ಪಡೆಯಲು ತನಿಖಾಧಿಕಾರಿ ಸ್ವತಂತ್ರರಾಗಿರುತ್ತಾರೆ. ಆದರೆ, ಅದೇ ದಿನ ಸಂಜೆ 6 ಗಂಟೆಯೊಳಗೆ 1 ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಪಡೆದು ಆರೋಪಿಯನ್ನು ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಆರೋಪಿಯು ಸಕಾರಣಗಳಿಲ್ಲದೆ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವುದರಿಂದ ತಪ್ಪಿಸಿಕೊಳ್ಳಬಾರದು. ಸಾಕ್ಷ್ಯಾಧಾರಗಳನ್ನು ನಾಶಪಡಿಸಲು ಯತ್ನಿಸಬಾರದು. ತನಿಖೆಗೆ ಸಹಕರಿಸಬೇಕು. ತನಿಖಾಧಿಕಾರಿಗಳು ಸೂಚಿಸಿದಾಗ ಅವರ ಮುಂದೆ ತಪ್ಪದೆ ಹಾಜರಾಗಬೇಕು. ಭವಿಷ್ಯದಲ್ಲಿ ಇದೇ ಮಾದರಿಯ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂಬ ಷರತ್ತುಗಳನ್ನು ಹೈಕೋರ್ಟ್ ವಿಧಿಸಿದೆ.
ವಾದ-ಪ್ರತಿವಾದ:
ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ಬಿ.ನಾಗೇಂದ್ರ, ಈ ಹಿಂದೆ ಆರೋಪಿಗೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 41 ಎ ಅನುಸಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಪೊಲೀಸರು ನೋಟಿಸ್ ನೀಡಿದ್ದರು. ಆಗ ಆತ ಪೊಲೀಸರ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಿದ್ದಾನೆ. ಹೀಗಿದ್ದರೂ, ಅರ್ಜಿದಾರನ ಬಂಧನಕ್ಕೆ ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಅರ್ಜಿದಾರ ಸಿದ್ಧನಿದ್ದು, ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಕೋರಿದ್ದರು.
ಅರ್ಜಿಗೆ ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲೆ ಎಂ.ಎಂ.ವಹೀದಾ, ಮಕ್ಕಳ ಅಶ್ಲೀಲ ಚಿತ್ರ ವೀಕ್ಷಿಸಿದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ಗಂಭೀರ ಆರೋಪ ಅರ್ಜಿದಾರನ ಮೇಲಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಆದ್ದರಿಂದ, ನಿರೀಕ್ಷಣಾ ಜಾಮೀನು ಕೋರಿ ಆರೋಪಿ ಸಲ್ಲಿಸಿರುವ ಅರ್ಜಿ ವಜಾಗೊಳಿಸಬೇಕೆಂದು ಮನವಿ ಮಾಡಿದ್ದರು.
Related Articles
Thank you for your comment. It is awaiting moderation.
Comments (0)