ಕೈಮಗ್ಗ ನಿಗಮದ ನಿವೃತ್ತ ನೌಕರರ ಗಳಿಕೆ ರಜೆ ನಗದೀಕರಣ ವಿಳಂಬ; 3 ತಿಂಗಳೊಳಗೆ ಬಡ್ಡಿ ಪಾವತಿಸಲು ಹೈಕೋರ್ಟ್ ಆದೇಶ
- by Jagan Ramesh
- September 4, 2024
- 81 Views
ಬೆಂಗಳೂರು: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನಿವೃತ್ತ ನೌಕರರ ಗಳಿಕೆ ರಜೆ ನಗದೀಕರಣ ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಅದರ ಮೇಲಿನ ಬಡ್ಡಿಯನ್ನು ಮೂರು ತಿಂಗಳಲ್ಲಿ ಪಾವತಿಸುವಂತೆ ನಿಗಮಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಂಟಿ ಕಾರ್ಯದರ್ಶಿ ಬಿ.ಎಸ್. ಗುರುಸ್ವಾಮಿ ಹಾಗೂ ಇತರ 20 ಮಂದಿ ನಿವೃತ್ತ ನೌಕರರು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಅರ್ಜಿ ವಿಚಾರಣೆ ವೇಳೆ ಕೈಮಗ್ಗ ಅಭಿವೃದ್ಧಿ ನಿಗಮದ ಪರ ವಕೀಲರು ಹಾಜರಾಗಿ, ಗಳಿಕೆ ರಜೆ ನಗದೀಕರಣ ವಿಳಂಬಾಗಿರುವ ಹಿನ್ನೆಲೆಯಲ್ಲಿ ಅದರ ಮೇಲೆ ಬಡ್ಡಿ ಪಾವತಿಸುವುದಕ್ಕೆ ನಿಗಮದ ಸಮ್ಮತಿ ಇದೆ ಎಂದು ತಿಳಿಸಿದರು.
ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿದಾರರ ರಜೆ ನಗದೀಕರಣ ವಿಳಂಬವಾಗಿರುವ ಹಿನ್ನೆಲೆಯಲ್ಲಿ, ನಿವೃತ್ತ ನೌಕರರಿಗೆ ಪಿಂಚಣಿ, ಉಪದಾನ, ಪರಿವರ್ತಿತ ಪಿಂಚಣಿ, ನಿವೃತ್ತರ ಮರಣ ಪರಿಹಾರ ಹಾಗೂ ಗಳಿಕೆ ರಜೆ ನಗದೀಕರಣ ಬಿಡುಗಡೆ ಮಾಡಲು ವಿಳಂಬವಾದರೆ ವಾರ್ಷಿಕ ಶೇ.8ರಂತೆ ಬಡ್ಡಿ ಪಾವತಿಬೇಕು ಎಂಬ 2003ರ ಆಗಸ್ಟ್ 21ರಂದು ಸರ್ಕಾರ ಹೊರಡಿಸಿರುವ ಆದೇಶ ಹಾಗೂ ಇದೇ ನಿಗಮದ ನಿವೃತ್ತ ನೌಕರರ ನಿವೃತ್ತಿ ಭತ್ಯೆಗಳಿಗೆ ಸಂಬಂಧಿಸಿದಂತೆ 2021ರ ಡಿಸೆಂಬರ್ 7ರಂದು ಹೈಕೋರ್ಟ್ ನೀಡಿರುವ ಆದೇಶದ ಅನುಸಾರ ಶೇ.8 ಬಡ್ಡಿಯನ್ನು ಮೂರು ತಿಂಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ವಕೀಲ ಎಚ್.ಸಿ. ಸುಂದರೇಶ್ ವಾದ ಮಂಡಿಸಿದ್ದರು.
ಪ್ರಕರಣವೇನು?
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನೌಕರರಾಗಿರುವ ಅರ್ಜಿದಾರರು, 2014ರಿಂದ 2023ರ ಅವಧಿಯಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ನಿಯಮದಂತೆ ನಿವೃತ್ತಿಯಾದ 30 ದಿನಗಳಲ್ಲಿ ಪಿಂಚಣಿ, ಉಪದಾನ, ರಜೆ ನಗದೀಕರಣ ಸೇರಿ ಇತರ ನಿವೃತ್ತಿ ಭತ್ಯೆಗಳನ್ನು ಬಿಡುಗಡೆ ಮಾಡಬೇಕು. ಆದರೆ, ನಿವೃತ್ತ ನೌಕರರ ರಜೆ ನಗದೀಕರಣ ಬಿಡುಗಡೆ ಮಾಡಲು ಕನಿಷ್ಠ 7ರಿಂದ 52 ತಿಂಗಳವರೆಗೆ ವಿಳಂಬ ಮಾಡಲಾಗಿದೆ. ಆದ್ದರಿಂದ, 2003ರ ಸರ್ಕಾರದ ಆದೇಶ ಹಾಗೂ 2021ರ ಹೈಕೋರ್ಟ್ ಆದೇಶದಂತೆ ತಮಗೆ ಗಳಿಕೆ ರಜೆ ನಗದೀಕರಣ ವಿಳಂಬ ಆಗಿರುವುದಕ್ಕೆ ಅದರ ಮೇಲೆ ಬಡ್ಡಿ ಪಾವತಿಸಲು ನಿಗಮಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು.
Related Articles
Thank you for your comment. It is awaiting moderation.
Comments (0)