ಆಡಳಿತದಲ್ಲಿ ಶುದ್ಧತೆ ಖಚಿತಪಡಿಸಲು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ; ಹಿರಿಯ ವಕೀಲ ಕೆ.ಜಿ.ರಾಘವನ್
- by LegalSamachar
- September 2, 2024
- 155 Views
ಬೆಂಗಳೂರು: ಸಾರ್ವಜನಿಕ ಆಡಳಿತದಲ್ಲಿ ಶುದ್ಧತೆ ಖಚಿತಪಡಿಸುವುದೇ ಭ್ರಷ್ಟಾಚಾರ ನಿಯಂತ್ರಣ (ಪಿಸಿ) ಕಾಯ್ದೆಯ ಉದ್ದೇಶವಾಗಿದ್ದು, ಮುಡಾ ಹಗರಣ ಸಂಬಂಧ ಪ್ರಾಸಿಕ್ಯೂಷನ್ ನಡೆಸಲು ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಸಮಂಜಸವಾಗಿದೆ ಎಂದು ಹಿರಿಯ ವಕೀಲ ಕೆ.ಜಿ. ರಾಘವನ್ ಪ್ರತಿಪಾದಿಸಿದರು.
ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೊರಡಿಸಿರುವ ಆದೇಶ ರದ್ದುಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠದ ಮುಂದೆ ಸೋಮವಾರವೂ ಮುಂದುವರಿಯಿತು.
ಅರ್ಜಿಯಲ್ಲಿ ನಾಲ್ಕನೇ ಪ್ರತಿವಾದಿಯಾಗಿರುವ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕೆ.ಜಿ ರಾಘವನ್, ಇಡೀ ಪ್ರಕರಣದಲ್ಲಿ ಪಾರ್ವತಿ (ಸಿಎಂ ಪತ್ನಿ) ಅವರಿಗೆ ಮುಡಾ ಅಭಿವೃದ್ಧಿಪಡಿಸಿದ 14 ನಿವೇಶನಗಳ ಮಂಜೂರಾತಿ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿಗಳ ಪ್ರಭಾವವಿರುವ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.
ಸುದೀರ್ಘ 2 ಗಂಟೆಗಳ ಕಾಲ ಮಂಡಿಸಿದ ರಾಘವನ್, ಪಿಸಿ ಕಾಯ್ದೆಯ ಉದ್ದೇಶವೇ ಸಾರ್ವಜನಿಕ ಆಡಳಿತದಲ್ಲಿ ಶುದ್ಧತೆ ಕಾಯ್ದುಕೊಳ್ಳುವುದಾಗಿದೆ. ಸಾರ್ವಜನಿಕ ಸೇವಕರ ವಿರುದ್ಧ ಸೂಜಿಮೊನೆಯಷ್ಟು ಸಂಶಯ ಹುಟ್ಟಿದರೂ ತನಿಖೆ ನಡೆಯಬೇಕಿರುತ್ತದೆ. ಇದರಿಂದಲೇ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ಮುಡಾ ಹಗರಣದ ಅಭಿಯೋಜನೆಗೆ ಅನುಮತಿ ನೀಡಿದ್ದು, ಅದನ್ನು ವಿರೋಧಾತ್ಮಕವಾಗಿ ನೋಡದೆ, ಸಾರ್ವಜನಿಕ ಆಡಳಿತದಲ್ಲಿ ಶುದ್ಧತೆ ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ನೋಡಬೇಕಾಗುತ್ತದೆ ಎಂದು ತಿಳಿಸಿ, ತಮ್ಮ ವಾದ ಪೂರ್ಣಗೊಳಿಸಿದರು.
ಮತ್ತೊಂದು ವಾರ ಸಿಎಂ ನಿರಾಳ:
ಹಿರಿಯ ವಕೀಲ ಕೆ.ಜಿ. ರಾಘವನ್ ವಾದ ಪೂರ್ಣಗೊಂಡ ಬಳಿಕ ರಾಜ್ಯ ಸರ್ಕಾರದ ಪರ ವಾದ ಮಂಡಿಸಲು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಸೆಪ್ಟಂಬರ್ 9ಕ್ಕೆ ಮುಂದೂಡಿತು. ಅಲ್ಲಿಯವರೆಗೆ ಪ್ರಾಸಿಕ್ಯೂಷನ್ ಅನುಮತಿ ಆಧರಿಸಿ ಮುಖ್ಯಮಂತ್ರಿಗಳ ವಿರುದ್ಧದ ಆತುರದ ಕ್ರಮ ಜರುಗಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು. ಇದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ವಾರ ರಿಲೀಫ್ ಸಿಕ್ಕಂತಾಗಿದೆ.
ಸೆಪ್ಟಂಬರ್ 9ರಂದು ಅಡ್ವೋಕೇಟ್ ಜನರಲ್ ವಾದ ಮಂಡನೆಯನ್ನು ಪೂರ್ಣಗೊಳಿಸಬೇಕು. ನಂತರ ಪ್ರತಿವಾದಿಗಳ ಪರ ವಕೀಲರು ಮಂಡಿಸಿರುವ ಪ್ರತಿವಾದಕ್ಕೆ ಮುಖ್ಯಮಂತ್ರಿಗಳ ಪರ ವಕೀಲರು ಸೆಪ್ಟಂಬರ್ 12ರಂದು ಉತ್ತರ ನೀಡಿ ವಾದ ಮಂಡಿಸಬೇಕು. ಅಂದು ಅರ್ಜಿ ಕುರಿತ ವಿಚಾರಣೆ ಪೂರ್ಣಗೊಳಿಸಬೇಕು ಎಂದು ನ್ಯಾಯಪೀಠ ಎಲ್ಲ ಪಕ್ಷಕಾರರಿಗೆ ಮೌಖಿಕವಾಗಿ ಸೂಚಿಸಿತು. ಒಂದೊಮ್ಮೆ ಸೆಪ್ಟಂಬರ್ 12ರಂದು ಅರ್ಜಿ ಕುರಿತ ವಾದ-ಪ್ರತಿವಾದ ಪೂರ್ಣಗೊಂಡರೆ, ಅಂದೇ ನ್ಯಾಯಾಲಯ ತೀರ್ಪು ಕಾಯ್ದಿಸಿರುವ ಸಾಧ್ಯತೆಯಿದೆ.
ಹೀಗಿತ್ತು ಕೆ.ಜಿ. ರಾಘವನ್ ವಾದ ಮಂಡನೆ:
ಮಾಧ್ಯಮಗಳಲ್ಲಿ ಮುಡಾ ಹಗರಣ ವರದಿಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿ ವೆಂಕಟಾಚಲಪತಿ ನೇತೃತ್ವದಲ್ಲಿ, ಬಳಿಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿದೆ. ಮೇಲ್ನೋಟಕ್ಕೆ ಪ್ರಕರಣದಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿರುವುದರಿಂದಲೇ ವಿಚಾರಣಾ ಆಯೋಗ ರಚಿಸಲಾಗಿದೆ. ಇದು ಸಾರ್ವಜನಿಕ ನಂಬಿಕೆ ಹಾಳಾಗಿರುವುದಕ್ಕೆ ಉತ್ತರವಾಗಿದೆ. ಸಾರ್ವಜನಿಕ ಆಡಳಿತದಲ್ಲಿ ಶುದ್ಧತೆ ಕಾಯ್ದುಕೊಳ್ಳಬೇಕಿರುವುದರಿಂದ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆಗೆ ಅನುಮತಿಸಿದ್ದು, ಪ್ರಕರಣದ ತನಿಖೆ ನಡೆಯುವ ಅಗತ್ಯವಿದೆ. ಕೊನೆಯಲ್ಲಿ ಸಿದ್ದರಾಮಯ್ಯ ಅವರು ಆರೋಪಮುಕ್ತರಾಗಿ ಹೊರಬಹುದು. ಆದರೆ, ನ್ಯಾಯಾಲಯಗಳು ಇಂತಹ ಪ್ರಕರಣಗಳ ತನಿಖೆಯನ್ನು ಆರಂಭದಲ್ಲೇ ಮೊಟಕುಗೊಳಿಸದೆ, ರಾಜ್ಯಪಾಲರ ಅನುಮತಿಗೆ ಬೆಂಬಲ ಸೂಚಿಸಬೇಕು ಎಂದು ರಾಘವನ್ ಮನವಿ ಮಾಡಿದರು.
ಬೇರೆಯವರಾಗಿದ್ದರೆ ಕೋರ್ಟ್ ಕದ ತಟ್ಟಬೇಕಿತ್ತು:
ಮೂಲತಃ ನಿಂಗ ಎಂಬುವರಿಗೆ ವಿವಾದಿತ 3.16 ಎಕರೆ ಮಂಜೂರಾಗಿತ್ತು. ನಿಂಗ ಅವರಿಗೆ ಮಲ್ಲಯ್ಯ, ಮೈಲಾರಯ್ಯ ಮತ್ತು ದೇವರಾಜು ಎಂಬ ಮಕ್ಕಳಿದ್ದರು. ಮೈಲಾರಯ್ಯ ಮತ್ತು ದೇವರಾಜು ಅವರು ಮಲ್ಲಯ್ಯಗೆ ಜಮೀನಿನ ಹಕ್ಕು ನೀಡಿದ್ದರು. ಆದ್ದರಿಂದ, ದೇವರಾಜು ಅವರಿಗೆ ಈ ಜಮೀನಿನ ಮೇಲೆ ಹಕ್ಕಿರಲಿಲ್ಲ. ದೇವನೂರು 5ನೇ ಹಂತದ ಬಡಾವಣೆಗೆ 1997ರ ಆಗಸ್ಟ್ 20ರಂದು ಈ ಜಮೀನು ಸ್ವಾಧೀನಪಡಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. 1998ರ ಮಾರ್ಚ್ 30ರಂದು ಜಮೀನು ಮಾಲೀಕರಿಗೆ ಪರಿಹಾರ ಹಣ ಠೇವಣಿ ಇಡಲಾಗಿತ್ತು. ಈ ಪ್ರಕ್ರಿಯೆ ನಂತರ ಬದಲಿ ನಿವೇಶನ ನೀಡುವ ಪ್ರಶ್ನೆಯೇ ಇಲ್ಲ. ಹೀಗಿದ್ದರೂ, ಜಮೀನಿನ ಮಾಲೀಕರಲ್ಲದ ದೇವರಾಜು ಸಲ್ಲಿಸಿದ ಅರ್ಜಿ ಮೇರೆಗೆ 1998ರ ಮೇ 18ರಂದು 3.16 ಎಕರೆ ಜಮೀನು ಡಿನೋಟಿಫೈ ಮಾಡಲಾಯಿತು. ಇದೊಂದೇ ಜಮೀನು ಡಿನೋಟಿಫೈ ಮಾಡಲಾಗಿದೆ ಎಂದು ಆಕ್ಷೇಪಿಸಿದರು.
ದೇವರಾಜು ಅವರು 2004ರ ಆಗಸ್ಟ್ 25ರಂದು ಜಮೀನನ್ನು ಬಿ.ಎಂ.ಮಲ್ಲಿಕಾರ್ಜುನ್‌ಗೆ ಮಾರಾಟ ಮಾಡಿದ್ದಾರೆ. ಆ ಜಮೀನನ್ನು ಮಲ್ಲಿಕಾರ್ಜುನ್ ತಮ್ಮ ಸಹೋದರಿ ಪಾರ್ವತಿಗೆ (ಸಿಎಂ ಪತ್ನಿ) ದಾನವಾಗಿ ನೀಡಿದ್ದಾರೆ. ಈ ವೇಳೆಗಾಗಲೇ ಭೂಸ್ವಾಧೀನಗೊಂಡು ಅಭಿವೃಧ್ಧಿಪಡಿಸಿ ನಿವೇಶನ ಹಂಚಲಾಗಿತ್ತು. 2014ರ ಜೂನ್ 23ರಂದು ಬದಲಿ ನಿವೇಶನಕ್ಕೆ ಸಿಎಂ ಪತ್ನಿ ಅರ್ಜಿ ಸಲ್ಲಿಸುತ್ತಾರೆ. ಆದರೆ, ಒಂದು ನಿವೇಶನವೂ ಪಡೆಯಲು ಅರ್ಹತೆ ಇಲ್ಲದ ಪಾರ್ವತಿ ಅವರಿಗೆ 14 ನಿವೇಶನ ನೀಡಲಾಗಿದೆ. ಸಿಎಂ ಪತ್ನಿ ಪಾರ್ವತಿ ಅವರಲ್ಲದೇ ಬೇರೆ ಯಾವುದೇ ಸಾಮಾನ್ಯ ವ್ಯಕ್ತಿ ಸ್ವಾಧೀನಪಡಿಸಿಕೊಂಡಿರುವ ತಮ್ಮ ಭೂಮಿಗೆ ಪರಿಹಾರ ಕೇಳಿದ್ದರೆ ಮುಡಾ ಆ ವ್ಯಕ್ತಿಗೆ ಭೂಮಿ ಮೇಲಿನ ಹಕ್ಕು ತೋರಿಸುವಂತೆ ಕೇಳುತ್ತತ್ತು. ಆಗ ಆ ವ್ಯಕ್ತಿ ನ್ಯಾಯಾಲಯದ ಮೆಟ್ಟಿಲೇರಬೇಕಿತ್ತು. ಆದರೆ, ಪಾರ್ವತಿ ಅವರ ಪ್ರಕರಣಲ್ಲಿ ಅದ್ಯಾವುದೂ ನಡೆದಿಲ್ಲ ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಸುಣ್ಣಕ್ಕೆ ಬೆಣ್ಣೆ ವಿನಿಮಯವೇ?
ಮುಡಾದಲ್ಲಿ 2003-09ರ ನಡುವೆ 60:40 ಅನುಪಾತದ ಯೋಜನೆ ಜಾರಿಯಲ್ಲಿತ್ತು. ಆದರೆ, ಪಾರ್ವತಿ ಅವರಿಗೆ ನಿವೇಶನ ಹಂಚಲು 2015ರಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು 50:50 ಅನುಪಾತದ ಯೋಜನೆಯನ್ನು ಮುಡಾ ಅಳವಡಿಸಿಕೊಂಡಿದೆ. ಮುಡಾ ವಿವಾದಿತ 3.16 ಎಕರೆ ಭೂಮಿಯನ್ನು ವಶಪಡಿಸಿಕೊಂಡಾಗ, ಆ ಜಮೀನಿನ ಮೌಲ್ಯ 3.24 ಲಕ್ಷ ರೂ. ಆಗಿತ್ತು. ಹೀಗಿರುವಾಗ ಯಾವ ಮೌಲ್ಯ ಆಧರಿಸಿ 14 ನಿವೇಶನಗಳನ್ನು ನೀಡಲಾಗಿದೆ? ಮುಡಾ ಯಾವುದೇ ರೀತಿಯಲ್ಲಿಯೂ ವಿವೇಚನೆ ಬಳಸಿಲ್ಲ. ಸುಣ್ಣಕ್ಕೆ ಬೆಣ್ಣೆ ವಿನಿಮಯವೇ? ಅದನ್ನೇ ಈ ಪ್ರಕರಣದಲ್ಲಿ ಮಾಡಲಾಗಿದೆ. ದುಬಾರಿ ಮೌಲ್ಯ ಹೊಂದಿರದ 3.16 ಎಕರೆ ಜಮೀನಿಗೆ ಪ್ರತಿಷ್ಠಿತ ಬಡಾವಣೆಯಲ್ಲಿ 14 ನಿವೇಶನ ಹಂಚಿಕೆ ಮಾಡಲಾಗಿದೆ. ಇದು ಸರಿಯೋ, ತಪ್ಪೋ ಎನ್ನುವುದರ ತನಿಖೆಯಾಗಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇವೆಲ್ಲವೂ ನಡೆದಿವೆ. 2017ರಲ್ಲಿ ಮುಡಾ ಕೈಗೊಂಡಿರುವ ನಿರ್ಣಯವೇ ಇಡೀ ಪ್ರಕರಣದ ಕೊಂಡಿಯಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದರು.
ವೈಯಕ್ತಿಕ ಪ್ರಭಾವ ಬಳಸಿದರೂ ಅಪರಾಧ:
ಅನುಚಿತ ಅನುಕೂಲ ಪಡೆಯಲು ಅಧಿಕಾರಿ ಮೇಲೆ ಪ್ರಭಾವ ಬಳಸಿದರೆ ಅಪರಾಧವಾಗುತ್ತದೆ. ಪಡೆಯುವ ಅನುಕೂಲ ಕಾನೂನು ಬಾಹಿರವಾಗಿಲ್ಲದಿದ್ದರೂ, ವೈಯಕ್ತಿಕ ಪ್ರಭಾವ ಬಳಸಿದರೂ ಅದು ಪಿಸಿ ಕಾಯ್ದೆಯ ಸೆಕ್ಷನ್ 7ರ ಅಡಿ ಅಪರಾಧವೆನಿಸಲಿದೆ. ಒಬ್ಬ ಸಚಿವ ಇಲಾಖೆಯಲ್ಲದೇ ಬೇರೆಡೆ ಪ್ರಭಾವ ಬೀರಿದರೂ ಅಪರಾಧವಾಗಲಿದೆ. ಆದ್ದರಿಂದ, ಮುಡಾ ನಿರ್ಣಯ ಅಥವಾ ನಿರ್ಧಾರದಲ್ಲಿ ಮುಖ್ಯಮಂತ್ರಿಗಳ ಪಾತ್ರವಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಅಲ್ಲಿ ಮುಖ್ಯಮಂತ್ರಿಗಳ ಸಣ್ಣ ಮಟ್ಟದ ಪಾತ್ರವಿದ್ದರೂ ಅದರ ತನಿಖೆಯಾಗಬೇಕು. ಹಗಲಿನಲ್ಲಿ ವಂಚನೆ ನಡೆಸುವುದಿಲ್ಲ. ಕತ್ತಲೆಯಲ್ಲಿ ಅದು ನಡೆಯುತ್ತದೆ. ವಂಚನೆ ನಡೆದಿದೆಯೋ, ಇಲ್ಲವೋ ಎಂಬುದನ್ನು ಅರಿಯಲು ಯಾವ ವಿಧಾನ ಅನುಸರಿಸಬೇಕು ಎಂದು ಹೇಳುವುದು ನ್ಯಾಯಾಲಯದ ಜವಾಬ್ದಾರಿಯಾಗಿದೆ ಎಂದು ರಾಘವನ್ ನುಡಿದರು.
Related Articles
Thank you for your comment. It is awaiting moderation.
Comments (0)