ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದ ಮರುತನಿಖೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್; ಆರೋಪಿ ಖುಲಾಸೆ ಪ್ರಶ್ನಿಸಿದ್ದ ಅರ್ಜಿಯೂ ತಿರಸ್ಕೃತ
- by Jagan Ramesh
- August 30, 2024
- 340 Views
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಬೇಕು ಹಾಗೂ ಆರೋಪಿ ಸಂತೋಷ್ ರಾವ್ನನ್ನು ಪ್ರಕರಣದಿಂದ ಖುಲಾಸೆಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣದ ಮರು ತನಿಖೆಗೆ ಆದೇಶಿಸುವಂತೆ ಕೋರಿ ಸೌಜನ್ಯಾ ತಂದೆ ಚಂದಪ್ಪ ಗೌಡ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರೆ, ಪ್ರಕರಣದಿಂದ ಸಂತೋಷ್ ರಾವ್ನನ್ನು ಖುಲಾಸೆಗೊಳಿಸಿದ ಸಿಬಿಐ ಕೋರ್ಟ್ ಆದೇಶ ರದ್ದು ಕೋರಿ ಸಿಬಿಐ ತನಿಖಾಧಿಕಾರಿಗಳು ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದರು. ಮತ್ತೊಂದೆಡೆ, ಪ್ರಕರಣದಲ್ಲಿ ನಿಜವಾದ ತಪ್ಪಿತಸ್ಥರನ್ನು ಪತ್ತೆ ಹಚ್ಚಲು ಸಿಬಿಐಗೆ ನಿರ್ದೇಶಿಸಬೇಕು ಹಾಗೂ ತನಗೆ ಪರಿಹಾರ ಪಾವತಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಮನವಿ ಮಾಡಿ ಸಂತೋಷ್ ರಾವ್ ಸಹ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಮೂರೂ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ಪೀಠ ಶುಕ್ರವಾರ ಪ್ರಕಟಿಸಿದ್ದು, ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ. ನ್ಯಾಯಾಲಯದ ವಿಸ್ತೃತ ಆದೇಶ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಅರ್ಜಿದಾರರ ಮನವಿ ಏನಾಗಿತ್ತು?
ಸೂಕ್ತ ಸಾಕ್ಷ್ಯಧಾರಗಳಿಲ್ಲ ಎಂಬ ಕಾರಣಕ್ಕೆ ಸಿಬಿಐ ವಿಶೇಷ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿದೆ. ಇದರಿಂದ, ಇಡೀ ತನಿಖೆ ನ್ಯಾಯೋಚಿತವಾಗಿ ನಡೆದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಆದ್ದರಿಂದ, ಪ್ರಕರಣದ ಮರು ತನಿಖೆ ನಡೆಸಲು ಸಿಬಿಐ ತನಿಖಾಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಸೌಜನ್ಯಾ ತಂದೆ ಚಂದಪ್ಪ ಗೌಡ ಕೋರಿದ್ದರು.
ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ನಡೆದ ಎರಡನೇ ದಿನಕ್ಕೆ ಆರೋಪಿ ಸಂತೋಷ್ ರಾವ್ನನ್ನು ಬಂಧಿಸಲಾಗಿತ್ತು. ಆತ ಆ ಊರಿನವನಲ್ಲ. ಘಟನಾ ಸ್ಥಳದಲ್ಲಿ ಏಕೆ ಇದ್ದ ಎಂಬುದಕ್ಕೆ ಆತ ವಿವರಣೆ ನೀಡಿಲ್ಲ. ಬೆನ್ನು ಹಾಗೂ ಮಂಡಿಯಲ್ಲಿ ಗಾಯವಾಗಿರುವುದಕ್ಕೂ ಸೂಕ್ತ ವಿವರಣೆ ನೀಡಿಲ್ಲ. ಘಟನಾ ಸ್ಥಳದಲ್ಲಿ ವಶಕ್ಕೆ ಪಡೆಯಲಾಗಿದ್ದ ಬಿಳಿ ಪಂಚೆಯಲ್ಲಿ ಆತನ ಕೂದಲು ಸಿಕ್ಕಿದೆ. ಈ ಕೂದಲು ಆತನದೇ ಎಂಬುದು ಡಿಎನ್ಎ ವರದಿಯಿಂದ ತಿಳಿದುಬಂದಿದ್ದು, ಆತನೇ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾನೆ ಎನ್ನುವುದು ಸಾಬೀತಾಗುತ್ತದೆ. ಆದ್ದರಿಂದ, ಸಂತೋಷ್ ರಾವ್ನನ್ನು ಖುಲಾಸೆಗೊಳಿಸಿದ್ದ ವಿಶೇಷ ನ್ಯಾಯಾಲಯದ ಆದೇಶದ ರದ್ದುಪಡಿಸಬೇಕು ಹಾಗೂ ಆತನನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಬೇಕು ಎಂದು ಸಿಬಿಐ ಪರ ವಕೀಲರಾದ ಪಿ. ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ಈ ಮಧ್ಯೆ ಸಂತೋಷ್ ರಾವ್ ಸಹ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿ, ಯಾವುದೇ ತಪ್ಪು ಮಾಡದಿದ್ದರೂ ನನ್ನನ್ನು ಪೊಲೀಸರು ಬಂಧಿಸಿದ್ದರು. ವಿಶೇಷ ನ್ಯಾಯಾಲಯ ಪ್ರಕಣದಿಂದ ನನ್ನನ್ನು ದೋಷಮುಕ್ತಗೊಳಿಸಿದೆ. ಆದರೆ, ನಿಜವಾದ ಅಪರಾಧಿ ತಪ್ಪಿಸಿಕೊಂಡಿದ್ದಾನೆ. ಆದ್ದರಿಂದ, ಪ್ರಕರಣದ ಮರು ತನಿಖೆ ನಡೆಸಿ, ನಿಜವಾದ ಅಪರಾಧಿಯನ್ನು ಬಂಧಿಸಬೇಕು. ಆತನನ್ನು ಅಭಿಯೋಜನೆಗೆ ಗುರುಪಡಿಸಲು ಸಿಬಿಐಗೆ ಆದೇಶಿಸಬೇಕು. ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸದ ತನಿಖಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ಮತ್ತು ತನ್ನ ವಿರುದ್ಧ ತನಿಖಾಧಿಕಾರಿಗಳು ದುರುದ್ದೇಶಪೂರಿತ ಪ್ರಾಸಿಕ್ಯೂಷನ್ ನಡೆಸಿರುವ ಹಿನ್ನೆಲೆಯಲ್ಲಿ 50 ಲಕ್ಷ ರೂ. ಪರಿಹಾರ ಪಾವತಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಪ್ರಕರಣವೇನು?
2012ರ ಅಕ್ಟೋಬರ್ 9ರಂದು ವಿದ್ಯಾರ್ಥಿನಿ ಸೌಜನ್ಯಾಳನ್ನು ಅಪಹರಿಸಿ, ಸಾಮೂಹಿಕವಾಗಿ ಅತ್ಯಾಚಾರವೆಸಗಿ ಹತ್ಯೆ ಮಾಡಲಾಗಿತ್ತು. ಮೊದಲಿಗೆ ಪ್ರಕರಣದ ತನಿಖೆ ನಡೆಸಿದ್ದ ಬೆಳ್ತಂಗಡಿ ಠಾಣೆ ಪೊಲೀಸರು ಸಂತೋಷ್ ರಾವ್ನನ್ನು ಬಂಧಿಸಿದ್ದರು. ನಂತರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದ ಸರ್ಕಾರ, ಬಳಿಕ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು.
ತನಿಖೆ ಪೂರ್ಣಗೊಳಿಸಿದ ಸಿಬಿಐ ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಸಂತೋಷ್ ರಾವ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಪ್ರಾಸಿಕ್ಯೂಷನ್ (ತನಿಖಾಧಿಕಾರಿಗಳು) ಈ ಅಪರಾಧ ಕೃತ್ಯದಲ್ಲಿ ಆರೋಪಿಯ ಪಾತ್ರ ಇರುವುದನ್ನು ಮತ್ತು ಆತನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ. ಗೋಲ್ಡನ್ ಅವರ್ನಲ್ಲಿ ತನಿಖೆಯನ್ನು (ಪ್ರಕರಣ ಘಟಿಸಿದ ಅಲ್ಪ ಅವಧಿಯಲ್ಲಿಯೇ ನಡೆಸುವ ಮಾಹಿತಿ, ಸಾಕ್ಷ್ಯ ಸಂಗ್ರಹ) ಸಮರ್ಪಕವಾಗಿ ನಡೆಸಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದ ವಿಶೇಷ ನ್ಯಾಯಾಲಯ, ಸೂಕ್ತ ಸಾಕ್ಷ್ಯಧಾರಗಳಿಲ್ಲ ಎಂಬ ಕಾರಣಕ್ಕೆ ಸಂತೋಷ್ ರಾವ್ನನ್ನು ಖುಲಾಸೆಗೊಳಿಸಿ 2023ರ ಜೂನ್ 16ರಂದು ಆದೇಶಿಸಿತ್ತು. ಇದರಿಂದ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
Related Articles
Thank you for your comment. It is awaiting moderation.
Comments (0)