ಎಚ್.ಡಿ. ರೇವಣ್ಣ ಜಾಮೀನು ಎತ್ತಿ ಹಿಡಿದ ಹೈಕೋರ್ಟ್; ಎಸ್‌ಐಟಿ ಅರ್ಜಿ ವಜಾ

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆಯ ಅಪಹರಣ ಪ್ರಕರಣದ ಮೊದಲನೇ ಆರೋಪಿ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣಗೆ ಮಂಜೂರು ಮಾಡಲಾಗಿರುವ ಜಾಮೀನು ರದ್ದುಪಡಿಸುವಂತೆ ಕೋರಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಮತ್ತೊಂದೆಡೆ, ಅಪಹರಣ ಪ್ರಕರಣದ ಇತರ ಆರೋಪಿಗಳಾದ ಹಾಸನದ ಸತೀಶ್ ಬಾಬು ಮತ್ತಿತರರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್, ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಎಚ್.ಡಿ. ರೇವಣ್ಣ ಅವರ ಜಾಮೀನು ರದ್ದು ಕೋರಿ ಎಸ್‌ಐಟಿ ಸಲ್ಲಿಸಿದ್ದ ಅರ್ಜಿ ಹಾಗೂ ಅಪಹರಣ ಪ್ರಕರಣದಲ್ಲಿ ಜಾಮೀನು ಕೋರಿ ಇತರ 6 ಆರೋಪಿಗಳು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಮಂಗಳವಾರ ಪ್ರಕಟಿಸಿತು.

ಎಸ್‌ಐಟಿ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ಎಚ್‌.ಡಿ. ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿದ್ದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಎತ್ತಿ ಹಿಡಿದಿದೆ. ಇದೇ ವೇಳೆ, ಪ್ರಕರಣದ 2ರಿಂದ 6ನೇ ಆರೋಪಿಗಳ ಅರ್ಜಿಗಳನ್ನು ಮಾನ್ಯ ಮಾಡಿರುವ ಹೈಕೋರ್ಟ್ ಎಲ್ಲರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯದ ವಿಸ್ತೃತ ಆದೇಶ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ತೀರ್ಪು ಪ್ರಕಟಿಸಿದ ಬಳಿಕ ನ್ಯಾಯಪೀಠ, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 364ಎ ಅಡಿ ಕಾಗ್ನಿಜೆನ್ಸ್ (ಸಂಜ್ಞೇ) ಪರಿಗಣಿಸಿಲ್ಲವೇ? ಎಂದು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್‌.ಜಗದೀಶ್‌ ಅವರನ್ನು ಪ್ರಶ್ನಿಸಿತು. ಅದಕ್ಕೆ ಜಗದೀಶ್‌ ಅವರು, ಇಲ್ಲ. ವಿಚಾರಣಾ ನ್ಯಾಯಾಲಯದ ಆದೇಶವನ್ನು ನಾವು ಪ್ರಶ್ನಿಸುತ್ತಿದ್ದೇವೆ. ಆ ಆದೇಶವು ಆರೋಪಿಗಳನ್ನು ಪ್ರಕರಣದಿಂದ ಆರೋಪ ಮುಕ್ತಗೊಳಿಸಿದ ಆದೇಶದಿಂತಿದೆ ಎಂದರು. ಆಗ ನ್ಯಾಯಪೀಠ, ಮುಂದೆ ನೋಡೋಣ ಬಿಡಿ ಎಂದು ಹೇಳಿತು.

ವಾದ-ಪ್ರತಿವಾದ:
ಜಾಮೀನು ರದ್ದುಕೋರಿದ್ದ ಅರ್ಜಿ ವಿಚಾರಣೆ ವೇಳೆ ಎಸ್ಐಟಿ ಪರವಾಗಿ ವಾದ ಮಂಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್, ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ರೇವಣ್ಣಗೆ ಜಾಮೀನು ನೀಡುವಾಗ ವಿಚಾರಣಾ ನ್ಯಾಯಾಲಯ ಪ್ರಮಾದವೆಸಗಿದೆ. ಸಂತ್ರಸ್ತೆಯನ್ನು ಅಪಹರಿಸಿ 7ನೇ ಆರೋಪಿಯ ಮನೆಯಲ್ಲಿ ಇಡಲಾಗಿತ್ತು. ಆ ಸ್ಥಳದಲ್ಲಿ ಮಹಜರು ನಡೆಸಿದಾಗ, ಆಕೆಯ ಕೂದಲು ದೊರೆತಿದೆ. ಸಂತ್ರಸ್ತ ಮಹಿಳೆಯನ್ನು ಒತ್ತೆ ಇಟ್ಟಿದ್ದ 7ನೇ ಆರೋಪಿ ಈ ಹಿಂದೆ ರೇವಣ್ಣ ಅವರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದರು ಎಂಬುದು ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಆದ್ದರಿಂದ, ರೇವಣ್ಣ ಅವರ ಜಾಮೀನು ರದ್ದುಪಡಿಸಬೇಕು ಎಂದು ಕೋರಿದ್ದರು.

ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, ಇಡೀ ಘಟನೆ ನೋಡಿದರೆ ಇಲ್ಲಿ ಐಪಿಸಿ ಸೆಕ್ಷನ್ 364ಎ ಅನ್ವಯಿಸುವುದಿಲ್ಲ. ಪ್ರಕರಣದಲ್ಲಿ ಯಾವುದೇ ಆರೋಪಿಯು ಸಂತ್ರಸ್ತೆಗೆ ಯಾವುದೇ ಹಾನಿ ಮಾಡಿಲ್ಲ. ಬೆದರಿಕೆ ಹಾಕಿಲ್ಲ ಎಂಬುದು ವಿಚಾರಣಾ ನ್ಯಾಯಾಲಯ ಸ್ಪಷ್ಟವಾಗಿ ಆದೇಶದಲ್ಲಿ ದಾಖಲಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.

6 ಆರೋಪಿಗಳಿಗೆ ಜಾಮೀನು:
ಇನ್ನು ಪ್ರಕರಣದ ಇತರ ಆರೋಪಿಗಳಾದ ಸತೀಶ್ ಬಾಬು, ಎಚ್.ಕೆ.ಸುಜಯ್, ಎಚ್.ಎನ್. ಮಧು, ಎಸ್.ಟಿ. ಕೀರ್ತಿ, ಎಚ್‌.ಡಿ ಮಾಯು ಗೌಡ, ಕೆ.ಎ. ರಾಜಗೋಪಾಲ್ ಅವರ ಅರ್ಜಿಗಳನ್ನು ಪುರಸ್ಕರಿಸಿರುವ ಹೈಕೋರ್ಟ್, ಎಲ್ಲ ಆರೋಪಿಗಳೂ ತಲಾ ಐದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಭದ್ರತಾ ಖಾತ್ರಿ ಒದಗಿಸಬೇಕು. ತನಿಖೆಗೆ ಸಹಕರಿಸಬೇಕು, ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ, ಪ್ರಕರಣದ 9 ಆರೋಪಿಗಳಲ್ಲಿ 8 ಮಂದಿಗೆ ಜಾಮೀನು ದೊರೆತಂತಾಗಿದ್ದು, ಭವಾನಿ ರೇವಣ್ಣ ಅವರ ಕಾರು ಚಾಲಕ ಮಾತ್ರ ಇನ್ನೂ ತಲೆಮರೆಸಿಕೊಂಡಿದ್ದಾನೆ.

Related Articles

Comments (0)

Leave a Comment