ಮಾಲೂರು ಕ್ಷೇತ್ರದ ಮತ ಎಣಿಕೆ ದೃಶ್ಯಾವಳಿ ನಾಪತ್ತೆ; ಪ್ರಮಾಣಪತ್ರ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಕೋಲಾರದ ಮಾಲೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆಯ ಸಂಪೂರ್ಣ ವಿಡಿಯೋ (ಸಿಸಿ ಕ್ಯಾಮರಾ ದೃಶ್ಯಾವಳಿ) ನಾಪತ್ತೆೆಯಾಗಿರುವ ಬಗ್ಗೆ ವಿವರಣೆ ನೀಡಿ ಪ್ರಮಾಣಪತ್ರ ಸಲ್ಲಿಸುವಂತೆ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ವೆಂಕಟರಾಜ (ಹಾಲಿ ಕೊಡಗು ಜಿಲ್ಲಾಾಧಿಕಾರಿ) ಅವರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕಾಂಗ್ರೆೆಸ್‌ನ ಕೆ.ವೈ. ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸುವಂತೆ ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಎಸ್. ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.

ಅರ್ಜಿ ವಿಚಾರಣೆ ವೇಳೆ ಜಿಲ್ಲಾ ಚುನಾವಣಾಧಿಕಾರಿ ಪರ ವಕೀಲ ಶರತ್ ದೊಡ್ಡವಾಡ ವಾದ ಮಂಡಿಸಿ, ಮತ ಎಣಿಕೆ ಕಾರ್ಯದ ದೃಶ್ಯಾವಳಿಗಳ ಪತ್ತೆೆಗೆ ಪ್ರಯತ್ನಿಸಲಾಗಿದೆ. ಆದರೆ, ಚುನಾವಣೆ, ಮತ ಎಣಿಕೆ ಎಲ್ಲವೂ ಹಿಂದಿನ ಜಿಲ್ಲಾ ಚುನಾವಣಾಧಿಕಾರಿಗಳ ಅವಧಿಯಲ್ಲಿ ನಡೆದಿದ್ದು, ಸ್ಟ್ರಾಂಗ್‌ರೂಂ ತೆರೆಯುವ ಪ್ರಕ್ರಿಯೆ ಸಹ ಅವರ ಸಮ್ಮುಖದಲ್ಲೇ ನಡೆದಿದೆ. ಆಗಿನ ಮತ ಎಣಿಕೆಯ ವಿಡಿಯೋ ಚಿತ್ರೀಕರಣ, ಸಿಸಿ ಕ್ಯಾಮರಾ ದೃಶ್ಯಾವಳಿ ಬಗ್ಗೆೆ ಈಗಿನ ಜಿಲ್ಲಾ ಚುನಾವಣಾಧಿಕಾರಿಗೆ ಮಾಹಿತಿ ಇಲ್ಲ. ಈ ವಿಚಾರವನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಸಿಸಿ ಕ್ಯಾಮರಾಗಳನ್ನು ಪೂರೈಸಿದ ಖಾಸಗಿ ಕಂಪನಿಯಿಂದಲೂ ಮಾಹಿತಿ ಕೇಳಲಾಗಿತ್ತು. ಒಟ್ಟಾರೆ, ಚುನಾವಣೆ ಹಾಗೂ ಮತ ಎಣಿಕೆ ನಡೆದಾಗ ಈಗಿನ ಜಿಲ್ಲಾ ಚುನಾವಣಾಧಿಕಾರಿ ಕೋಲಾರ ಜಿಲ್ಲಾಧಿಕಾರಿ ಆಗಿರಲಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಇದನ್ನು ದಾಖಲಿಸಿಕೊಂಡ ಪೀಠ, ಮತ ಎಣಿಕೆಯ ದೃಶ್ಯಾವಳಿ ನಾಪತ್ತೆೆಯಾಗಿರುವ ಬಗ್ಗೆೆ ಪ್ರಮಾಣಪತ್ರ ಸಲ್ಲಿಸುವಂತೆ ಚುನಾವಣೆ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ, ಹಾಲಿ ಕೊಡಗು ಡಿಸಿ ವೆಂಕಟರಾಜ ಅವರಿಗೆ ನಿರ್ದೇಶಿಸಿತು. ಜತೆಗೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ವೆಂಕಟರಾಜ ಅವರು ತಮ್ಮದೇ ತನಿಖೆಯನ್ನೂ ನಡೆಸಬಹುದು ಎಂದು ತಿಳಿಸಿದ ಪೀಠ, ಅರ್ಜಿ ವಿಚಾರಣೆಯನ್ನು ಸೆಪ್ಟಂಬರ್ 10ಕ್ಕೆೆ ಮುಂದೂಡಿತು.

ಖುದ್ದು ಹಾಜರಿದ್ದ ಕೋಲಾರ ಡಿಸಿ:
ಮತ ಎಣಿಕೆ ಪ್ರಕ್ರಿಯೆಯ ಸಂಪೂರ್ಣ ದೃಶ್ಯಾವಳಿಗಳನ್ನು ನ್ಯಾಯಾಲಯಕ್ಕೆೆ ಸಲ್ಲಿಸಬೇಕು, ಇಲ್ಲವಾದರೆ ಜಿಲ್ಲಾ ಚುನಾವಣಾಧಿಕಾರಿ ಆಗಸ್ಟ್ 27ರಂದು ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಕಳೆದ ವಿಚಾರಣೆ ವೇಳೆ ಹೈಕೋರ್ಟ್ ಆದೇಶಿಸಿತ್ತು. ಅದರಂತೆ, ಸದ್ಯ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಹಾಲಿ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಂಗಳವಾರ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ಪ್ರಕರಣವೇನು?
ಮಾಲೂರು ವಿಧಾನಸಭೆ ಕ್ಷೇತ್ರ ಮತ ಎಣಿಕೆ ಪ್ರಕ್ರಿಯೆಯಲ್ಲಿ ಹಲವು ಲೋಪದೋಷಗಳಾಗಿವೆ. ಆದ್ದರಿಂದ, ಆ ಕ್ಷೇತ್ರದಿಂದ ಶಾಸಕರಾಗಿ ಕೆ.ವೈ. ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಕೆ.ಎಸ್. ಮಂಜುನಾಥ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಅರ್ಜಿಯ ಕಳೆದ ವಿಚಾರಣೆ ವೇಳೆ ಜಿಲ್ಲಾ ಚುನಾವಣಾಧಿಕಾರಿಯ ಪರ ವಕೀಲರು ಮತ ಎಣಿಕೆ ವೇಳೆ ವಿವಿ ಪ್ಯಾಟ್ ಎಣಿಕೆ ಮತ್ತು ಹೊಂದಾಣಿಕೆ ಕಾರ್ಯದ ಚಿತ್ರೀಕರಣದ ದೃಶ್ಯಾವಳಿ ಒಳಗೊಂಡ ಆರು ಸಿಡಿಗಳನ್ನು ನ್ಯಾಯಾಲಯಕ್ಕೆೆ ಸಲ್ಲಿಸಿದರು. ಜತೆಗೆ, ಮತ ಎಣಿಕೆ ವೇಳೆ ಅಭ್ಯರ್ಥಿಗಳ ಏಜೆಂಟರಿಗೆ ನೀಡಲಾಗಿದ್ದ ಫಾರ್ಮ್ ನಂ.17(ಸಿ)ನ ನಕಲು ಪ್ರತಿಗಳನ್ನೂ ಸಲ್ಲಿಸಿದ್ದರು. ಮತ ಎಣಿಕೆ ಕಾರ್ಯದ ವಿಡಿಯೋ ಶೋಧಿಸಲಾಗುತ್ತಿದೆ ಎಂದು ಹೇಳಿದ್ದರು.

Related Articles

Comments (0)

Leave a Comment