- ಟ್ರಯಲ್ ಕೋರ್ಟ್
- Like this post: 1
ತನಿಖಾಧಿಕಾರಿಗೆ ಶೋಕಾಸ್ ನೋಟಿಸ್; ಲಂಚ ಪಡೆದು ಬಿಟಿಸಿಎಲ್ ಸ್ಟ್ಯುವರ್ಡ್ ನೇಮಕ ಆರೋಪ
- by Jagan Ramesh
- August 26, 2024
- 74 Views
ಬೆಂಗಳೂರು: ಮೈಸೂರಿನ ವಿವೇಕ್ ಹೋಟೆಲ್ಸ್ನ ವ್ಯವಸ್ಥಾಪಕ ನಿರ್ದೇಶಕ ಎಲ್.ವಿವೇಕಾನಂದ ಅವರನ್ನು ಕೋಟ್ಯಂತರ ರೂ. ಲಂಚ ಪಡೆದು ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ನ (ಬಿಟಿಸಿಎಲ್) ಮೇಲ್ವಿಚಾರಕನಾಗಿ (ಸ್ಟ್ಯುವರ್ಡ್) ನಾಮನಿರ್ದೇಶನ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ ಪಾಲಿಸಲು ವಿಫಲವಾಗಿರುವ ತನಿಖಾಧಿಕಾರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಲೋಕಾಯುಕ್ತ ಪೊಲೀಸರ ಅಂತಿಮ ವರದಿಗೆ ಆಕ್ಷೇಪಿಸಿ, ದೂರುದಾರ ಎನ್.ಆರ್.ರಮೇಶ್ ಸಲ್ಲಿಸಿದ್ದ ಪ್ರತಿಭಟನಾ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿದ್ದ ಪೀಠ, ತನಿಖಾಧಿಕಾರಿ ಎಚ್.ಜೆ. ತಿಪ್ಪೇಸ್ವಾಮಿ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತಲ್ಲದೆ, ಕಾನೂನಿನ ಅನ್ವಯ ನಡೆದುಕೊಳ್ಳಲು ತನಿಖಾಧಿಕಾರಿಗೆ ಸೂಚಿಸಲು ಆದೇಶದ ಪ್ರತಿಯನ್ನು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಬೇಕು ಎಂದು ತಿಳಿಸಿ, ವಿಚಾರಣೆಯನ್ನು ಸೆಪ್ಟಂಬರ್ 9ಕ್ಕೆ ಮುಂದೂಡಿತು.
ಆದೇಶದಲ್ಲೇನಿದೆ?
ಕಾನೂನಿನ ಪ್ರಕಾರ ತನಿಖಾಧಿಕಾರಿಯು ಆರು ತಿಂಗಳ ಒಳಗಾಗಿ ತನಿಖೆ ನಡೆಸಿ, ಅಂತಿಮ ವರದಿ ಸಲ್ಲಿಸಬೇಕು ಎಂದು ಆದೇಶವಾಗಿದ್ದರೂ ತನಿಖಾಧಿಕಾರಿಯು ಯಾವುದೇ ವರದಿ ಸಲ್ಲಿಸಿಲ್ಲ ಅಥವಾ ಹೆಚ್ಚಿನ ಕಾಲಾವಕಾಶಕ್ಕಾಗಿ ಮನವಿ ಸಲ್ಲಿಸಿಲ್ಲ. ವರದಿ ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕರು ಹೇಳಿದ್ದಾರೆ. ಆನಂತರ ಹಾಜರಾದ ಎಸ್ಪಿಪಿ ಅವರು ನ್ಯಾಯಾಲಯ ವೈಯಕ್ತಿಕವಾಗಿ ಲೋಕಾಯುಕ್ತಕ್ಕೆ ತಿಳಿಸದ ಹಿನ್ನೆಲೆಯಲ್ಲಿ ತನಿಖೆಯನ್ನೇ ನಡೆಸಿಲ್ಲ ಎಂದು ಹೇಳಿದ್ದಾರೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ.
ಹಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನ್ಯಾಯಾಲಯ 2022ರ ಡಿಸೆಂಬರ್ 16ರಂದು ಖಾಸಗಿ ದೂರು ದಾಖಲಿಸಿಕೊಂಡು, ತನಿಖಾಧಿಕಾರಿಗೆ ವಸ್ತುಸ್ಥಿತಿ ವರದಿ ಸಲ್ಲಿಸಲು ಆದೇಶಿಸಿತ್ತು. ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಕೈಬಿಡಲಾಗಿದೆ ಎಂದು ಉಲ್ಲೇಖಿಸಿ ತನಿಖಾಧಿಕಾರಿಯು ವಸ್ತುಸ್ಥಿತಿ ವರದಿ ಸಲ್ಲಿಸಿದ್ದಾರೆ. 2023ರ ಜೂನ್ 07ರಂದು ಸಲ್ಲಿಸಿರು ವಸ್ತುಸ್ಥಿತಿ ವರದಿಯನ್ನು ದೂರುದಾರರು ಪ್ರಶ್ನಿಸಿದ್ದು, ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ತನಿಖಾ ಸಂಸ್ಥೆಯು ನಡೆಸಿರುವ ತನಿಖೆಯು ಕಾನೂನಿನ ಪ್ರಕಾರವಿಲ್ಲ ಎಂದು 2024ರ ಫೆಬ್ರವರಿ 21ರಂದು ಆದೇಶಿಸಿದೆ ಎಂದು ಹೇಳಲಾಗಿದೆ.
ಆದ್ದರಿಂದ, ಮತ್ತೊಮ್ಮೆ ತನಿಖೆ ನಡೆಸಿ, ಹೊಸದಾಗಿ ವರದಿ ಸಲ್ಲಿಸಲು ನ್ಯಾಯಾಲಯ ಆದೇಶಿಸಿದೆ. ಹೀಗಿದ್ದರೂ, ತನಿಖಾ ಸಂಸ್ಥೆಯು ತನಿಖೆ ನಡೆಸುವ ಬಗ್ಗೆ ಗಮನ ಹರಿಸಿಲ್ಲ ಹಾಗೂ ಹೊಸ ವರದಿ ಸಲ್ಲಿಸಿಲ್ಲ. ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿಲ್ಲ. ತನಿಖಾ ಸಂಸ್ಥೆಯು ಸಲ್ಲಿಸಿರುವ ಪ್ರಾಥಮಿಕ ವರದಿ ಕಾನೂನಿಗೆ ಅನುಗುಣವಾಗಿಲ್ಲ ಎಂದು ಅದನ್ನು ತಳ್ಳಿಹಾಕಲಾಗಿದೆ ಎಂಬುದನ್ನು ಗಮನದಲ್ಲಿಕೊಟ್ಟುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ತನಿಖಾಧಿಕಾರಿ ತಿಪ್ಪೇಸ್ವಾಮಿ ಅವರು ನ್ಯಾಯಾಲಯದ ಮುಂದೆ ಹಾಜರಾಗಿ, ಕೋರ್ಟ್ ಆದೇಶದ ಬಗ್ಗೆ ತಮಗೆ ತಿಳಿಸಲಾಗಿಲ್ಲ ಎಂದಿದ್ದಾರೆ. ಸಂವಹನ ಸಮಸ್ಯೆಯಿಂದ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿಲ್ಲ ಎಂದು ಇನ್ನೊಮ್ಮೆ ಹೇಳಿದ್ದಾರೆ. ಆದ್ದರಿಂದ, ಈ ಕುರಿತು ಸರಿಯಾದ ವಿವರಣೆ ನೀಡಲು ತನಿಖಾಧಿಕಾರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಪ್ರಕರಣವೇನು?
2014ರ ಜುಲೈ 28ರಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ವಿವೇಕಾನಂದ ಅವರಿಂದ 1.30 ಕೋಟಿ ರೂ.ಗಳನ್ನು ಚೆಕ್ ಮೂಲಕ ಸ್ವೀಕರಿಸಿರುವುದು ಅವರೇ ಲೋಕಾಯುಕ್ತಕ್ಕೆ ಸಲ್ಲಿಸಿರುವ ಫಾರ್ಮ್ 4ರಲ್ಲಿ ಸ್ಪಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ ವಿವೇಕಾನಂದ ಅವರನ್ನು ಬಿಟಿಸಿಎಲ್ ಸ್ಟ್ಯುವರ್ಡ್ ಆಗಿ ನಾಮನಿರ್ದೇಶನ ಮಾಡಲಾಗಿದೆ. ಹಣದ ಲಾಭ ಮಾಡಿಕೊಂಡು ಸಿದ್ದರಾಮಯ್ಯ ಅವರು ವಿವೇಕಾನಂದ ಅವರಿಗೆ ಲಾಭದಾಯಕ ಹುದ್ದೆ ಕಲ್ಪಿಸಿದ್ದಾರೆ ಎಂದು ಆರೋಪಿಸಿದ್ದ ಎನ್.ಆರ್. ರಮೇಶ್, ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಹಾಗೂ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಕ್ರಮ ಜರುಗಿಸುವಂತೆ ಕೋರಿ ಖಾಸಗಿ ದೂರು ದಾಖಲಿಸಿದ್ದರು.
Related Articles
Thank you for your comment. It is awaiting moderation.
Comments (0)