‘ಬ್ಲ್ಯಾಕ್ ಮ್ಯಾಜಿಕ್’ ಪ್ರಯೋಗಿಸಿ ಕೊಲೆಯತ್ನ ಆರೋಪ; ಪತ್ನಿ ವಿರುದ್ಧ ಪತಿ ದಾಖಲಿಸಿದ್ದ ಖಾಸಗಿ ದೂರು ರದ್ದು

ಬೆಂಗಳೂರು: ವಾಮಾಚಾರ ನಡೆಸಿ ಕೊಲೆ ಮಾಡಲು ಯತ್ನಿಸಿದ ಆರೋಪ ಸಂಬಂಧ ಮಹಿಳೆಯೊಬ್ಬರ ವಿರುದ್ಧ ಆಕೆಯ ಪತಿ ದಾಖಲಿಸಿದ್ದ ಖಾಸಗಿ ದೂರು ಹಾಗೂ ಅದಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಪತಿ ದಾಖಲಿಸಿರುವ ದೂರು ಹಾಗೂ ದೂರನ್ನು ತನಿಖೆ ನಡೆಸಲು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಹೊರಡಿಸಿದ್ದ ಆದೇಶ ರದ್ದು ಕೋರಿ ಬೆಂಗಳೂರಿನ ಬಸವನಗುಡಿ ನಿವಾಸಿ ಅಫ್ರೀನ್‌ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಮಹಿಳೆಯ ವಿರುದ್ಧದ ಪ್ರಕರಣ ರದ್ದುಪಡಿಸಿದೆ.

ಇದೇ ವೇಳೆ, ವರದಕ್ಷಿಣೆ ಕಿರುಕುಳ, ಕ್ರೌರ್ಯ ಹಾಗೂ ಹಲ್ಲೆ ಆರೋಪ ಸಂಬಂಧ ಪತ್ನಿ ಸಲ್ಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ಪತಿ ಮೊಹಮ್ಮದ್‌ ಶಾಹಿದ್‌ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಾಲಯ, ಪ್ರಕರಣದಲ್ಲಿ ಶಾಹೀದ್‌‌ನ ತಾಯಿಯ ವಿರುದ್ಧದ ಆರೋಪಗಳನ್ನು ಕೈಬಿಟ್ಟಿದೆ.

ಬುಡದಲ್ಲೇ ಕಿತ್ತುಹಾಕಬೇಕು:
ಮಾಟ ಮಂತ್ರ ಮಾಡಿಸಿ ತನ್ನನ್ನು ಕೊಲೆ ಮಾಡಲು ಯತ್ನಿಸಿದ, ಜೀವ ಬೆದರಿಕೆ ಹಾಕಿದ, ಮನೆ ಕಳ್ಳತನ ಸೇರಿ ಇನ್ನಿತರ ಆರೋಪಗಳ ಸಂಬಂಧ ಅರ್ಜಿದಾರೆಯ ವಿರುದ್ಧ ಆಕೆಯ ಪತಿ ಮೊಹಮ್ಮದ್‌ ಶಾಹಿದ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಿದ್ದಾರೆ. ದೂರಿನ ಕುರಿತು ತನಿಖೆಗೆ ಆದೇಶಿಸುವ ಮುನ್ನ ಮ್ಯಾಜಿಸ್ಪ್ರೇಟ್‌ ಕೋರ್ಟ್‌ ವಿವೇಚನೆ ಬಳಸಿಲ್ಲ. ಇಂತಹ ನಕಲಿ ದೂರುಗಳನ್ನು ಬುಡದಲ್ಲಿಯೇ ಕಿತ್ತುಹಾಕಬಹುದಿತ್ತು. ಪತ್ನಿ ಸಲ್ಲಿಸಿದ್ದ ವರದಕ್ಷಿಣೆ ಕಿರುಕುಳ ದೂರಿಗೆ ಪತಿ ಪ್ರತಿದೂರು ದಾಖಲಿಸಿದ್ದಾರೆ. ಇಂತಹ ಆರೋಪಗಳನ್ನು ಒಪ್ಪಲಾಗದು. ಯಾವ ರೀತಿಯಲ್ಲೂ ಅರ್ಜಿದಾರ ಮಹಿಳೆಯ ವಿರುದ್ಧದ ದೂರು ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.

ಅರ್ಜಿದಾರೆಯ ವಿರುದ್ಧ ಆಕೆಯ ಪತಿ ದಾಖಲಿಸಿರುವ ದೂರನ್ನು ಮುಂದುವರಿಸಲು ಅನುಮತಿಸಿದರೆ, ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ. ಕೊಲೆ ಯತ್ನದ ಆರೋಪ ಮಾಡಲಾಗಿದ್ದು, ಅದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪತ್ನಿಯ ವಿರುದ್ಧ ಪತಿ ದಾಖಲಿಸಿದ್ದ ಖಾಸಗಿ ದೂರನ್ನು ರದ್ದುಪಡಿಸಿದೆ.

ಪ್ರಕರಣವೇನು?
ಪತ್ನಿ ಅಫ್ರೀನ್‌ ಮಾಟ ಮಂತ್ರ ಮಾಡಿಸಿ ತನ್ನನ್ನು ಹಾಗೂ ತನ್ನ ತಾಯಿಯನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಶಾಹಿದ್‌, 2023ರ ಫೆ.21ರಂದು ಖಾಸಗಿ ದೂರು ದಾಖಲಿಸಿದ್ದರು. ಆ ಕುರಿತು ತನಿಖೆ ನಡೆಸುವಂತೆ ಅಶೋಕ ನಗರ ಠಾಣೆ ಪೊಲೀಸರಿಗೆ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ಆದೇಶಿಸಿತ್ತು. ಇದರಿಂದ, ಅಫ್ರೀನ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಆರಂಭಿಸಿದ್ದರು.

Related Articles

Comments (0)

Leave a Comment