ಪ್ರಿಯಾಂಕ್ ಖರ್ಗೆ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆ
- by Jagan Ramesh
- August 22, 2024
- 230 Views
ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕೆ.ಎಸ್.ಈಶ್ವರಪ್ಪ (ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವ) ರಾಜೀನಾಮೆಗೆ ಆಗ್ರಹಿಸಿ ನಡೆಸಿದ್ದ ಪ್ರತಿಭಟನೆ ಸಂಬಂಧ ಪ್ರಿಯಾಂಕ್ ಖರ್ಗೆ ವಿರುದ್ಧದ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ವಿಶೇಷ ನ್ಯಾಯಾಲಯದ ಪ್ರಕ್ರಿಯೆ ರದ್ದುಕೋರಿ ಸಚಿವ ಪ್ರಿಯಾಂಕ್ ಖರ್ಗೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್ನ ಮತ್ತೊಂದು ಪೀಠ ಆ ಆರೋಪಿಗಳಿಗೆ 10 ಸಾವಿರ ರೂ. ದಂಡ ವಿಧಿಸಿತ್ತು. ಇದಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅದನ್ನು ಪರಿಗಣಿಸಿದ ಪೀಠ, ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧದ ವಿಚಾರಣಾ ನ್ಯಾಯಾಲಯದ ಎಲ್ಲ ಪ್ರಕ್ರಿಯೆಗಳಿಗೆ ಮುಂದಿನ ವಿಚಾರಣೆವರೆಗೆ ತಡೆ ವಿಧಿಸಲಾಗಿದೆ ಎಂದು ಮಧ್ಯಂತರ ಆದೇಶ ಮಾಡಿತು.
ಪ್ರಕರಣವೇನು?
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ರಾಜೀನಾಮೆಗೆ ಆಗ್ರಹಿಸಿ 2022ರ ಏಪ್ರಿಲ್ 14ರಂದು ಬೆಂಗಳೂರಿನ ರೇಸ್ ವ್ಯೂ ಹೋಟೆಲ್ ಬಳಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸಿದ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು, ಪ್ರಿಯಾಂಕ್ ಖರ್ಗೆಯೂ ಸೇರಿ 36 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 143 (ಕಾನೂನುಬಾಹಿರವಾಗಿ ಸಮಾವೇಶಗೊಳ್ಳುವುದು), ಕರ್ನಾಟಕ ಪೊಲೀಸ್ ಕಾಯ್ದೆ ಸೆಕ್ಷನ್ 103 ಅಡಿ ಪ್ರಕರಣ ದಾಖಲಿಸಿದ್ದರು.
ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ:
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರ ಅರ್ಜಿಗಳನ್ನು ಈ ಹಿಂದೆ ವಜಾಗೊಳಿಸಿದ್ದ ಹೈಕೋರ್ಟ್, ಆರೋಪಿಗಳಿಗೆ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನಿರ್ದೇಶಿಸಿತ್ತು.
ಜತೆಗೆ, ಅರ್ಜಿಯಲ್ಲಿ ಪೊಲೀಸ್ ಅಧಿಕಾರಿಯನ್ನು ಯಾವುದೇ ಸಮರ್ಥನೆ ನೀಡದೆ ಪ್ರತಿವಾದಿಯಾಗಿಸಲಾಗಿದೆ. ರಾಜಕೀಯಪ್ರೇರಿತ ಎಂದು ಅರ್ಜಿಯಲ್ಲಿ ಹೇಳಿರುವುದನ್ನು ಬಿಟ್ಟರೆ ಪೊಲೀಸ್ ಅಧಿಕಾರಿಯನ್ನು ಏಕೆ ಪ್ರತಿವಾದಿಯನ್ನಾಗಿಸಲಾಗಿದೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿಲ್ಲ. ಅಧಿಕಾರಿಯನ್ನು ವ್ಯಕ್ತಿಗತವಾಗಿ ಪ್ರತಿವಾದಿಯನ್ನಾಗಿಸಲಾಗಿದೆ. ಆದ್ದರಿಂದ, ಎಲ್ಲ ಅರ್ಜಿದಾರರು ತಲಾ 10 ಸಾವಿರ ರೂ. ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಾವತಿಸಬೇಕು ಎಂದು ಆದೇಶಿಸಿತ್ತು. ಈ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.
Related Articles
Thank you for your comment. It is awaiting moderation.
Comments (0)