ಜೈಲುಗಳಲ್ಲಿ ನಿಷೇಧಿತ ವಸ್ತುಗಳ ಪೂರೈಕೆ ಆರೋಪ; ಪರಿಶೀಲಿಸಲು ಸರ್ಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಕಾರಾಗೃಹದೊಳಗೆ ಗನ್‌, ಗಾಂಜಾ ಮತ್ತು ಬುಲೆಟ್‌ ಪೂರೈಕೆಯಾಗುತ್ತಿದ್ದು, ಹಣ ವಸೂಲಾತಿಗೆ ಜೈಲು ಅಧಿಕಾರಿಗಳೇ ಕೈದಿಗಳಿಗೆ ಸುಪಾರಿ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಆರೋಪದ ಬಗ್ಗೆ ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಮೌಖಿಕ ಸೂಚನೆ ನೀಡಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬರಿಗೆ ಮನೆ ಊಟ ಪೂರೈಸಲು ಅನುಮತಿ ನೀಡುವಂತೆ ಜೈಲು ಅಧೀಕ್ಷಕರಿಗೆ ನಿರ್ದೇಶಿಸಬೇಕೆಂದು ಕೋರಿ ಕೈದಿಯ ಸಂಬಂಧಿಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನಟ ದರ್ಶನ್‌ಗೆ ಮನೆಯೂಟ ಪೂರೈಸುವ ವಿಚಾರಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೋರ್ಟ್‌ ಹಾಲ್‌ನಲ್ಲೇ ಇದ್ದ ಕೈದಿಯ ಪರ ವಕೀಲ ಸಿರಾಜುದ್ದೀನ್‌ ಅಹ್ಮದ್‌ ಮುಂದೆ ಬಂದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ತಮ್ಮ ಕಕ್ಷಿದಾರನ ಅಳಿಯನಿಗೆ ಮನೆಯೂಟ ಪೂರೈಸಲು ಅನುಮತಿ ಕೋರಿ ಜೈಲು ಅಧೀಕ್ಷಕರು, ಕಾರಾಗೃಹ ಇಲಾಖೆಯ ಡಿಜಿಪಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಮನೆಯೂಟಕ್ಕೆ ಅನುಮತಿ ನೀಡಿದರೆ, ಭದ್ರತೆಗೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡುತ್ತಿದ್ದಾರೆ. ಬಳ್ಳಾರಿ, ಬೆಳಗಾವಿ, ಚಿತ್ರದುರ್ಗದ ಜೈಲಿನಲ್ಲಿ ಕೈದಿಗಳಿಗೆ ಮನೆ ಊಟ ಸರಬರಾಜು ಮಾಡಲು ಅವಕಾಶ ನೀಡಲಾಗುತ್ತಿದೆ. ಆದರೆ, ಬೆಂಗಳೂರು ಜೈಲಿನಲ್ಲಿ ಅದಕ್ಕೆ ಅನುಮತಿಸುತ್ತಿಲ್ಲ ಎಂದರು.

ಮುಂದುವರಿದು, ರಾಜ್ಯದ ಕಾರಾಗೃಹ ಒಂದರ ಒಳಗೆ ನಿಷೇಧಿತ ವಸ್ತುಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂದರು. ಆಗ, ನ್ಯಾಯಮೂರ್ತಿಗಳು ನಿಷೇಧಿತ ವಸ್ತುಗಳೆಂದರೆ ಯಾವುವು ಎಂದು ಪ್ರಶ್ನಿಸಿದರು. ಅದಕ್ಕುತ್ತರಿಸಿದ ವಕೀಲ ಸಿರಾಜುದ್ದೀನ್‌ ಅಹ್ಮದ್‌, ಮೊಬೈಲ್‌, ಗಾಂಜಾ, ಗನ್‌ ಮತ್ತು ಬುಲೆಟ್‌ ಅನ್ನು ಜೈಲಿನ ಒಳಗಡೆಗೆ ಜೈಲು ಅಧಿಕಾರಿಗಳೇ ಪೂರೈಸುತ್ತಿದ್ದಾರೆ. ಆ ಕುರಿತು ಜೈಲಿನಲ್ಲಿರುವ ಕೈದಿಯೊಬ್ಬ ಪತ್ನಿಗೆ ಮಾಹಿತಿ ನೀಡಿದ್ದಾನೆ. ಕೈದಿಯ ಪತ್ನಿ ಕಾರಾಗೃಹ ಡಿಜಿಪಿಗೆ ಇ-ಮೇಲ್‌ ಮೂಲಕ ದೂರು ನೀಡಿದ್ದಾರೆ. ಇದರಿಂದ, ಆ ಕೈದಿಯನ್ನು ಏಕಾಂತ ಸೆರೆಮನೆ ವಾಸಕ್ಕೆ ದೂಡಲಾಗಿದೆ. ಇನ್ನು ಕಾರಾಗೃಹದ ಜೈಲರ್ ಒಬ್ಬರು ಕೈದಿಗಳಿಗೆ ಸುಪಾರಿ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪವನ್ನೂ ಮಾಡಿದರು.

ಇದನ್ನು ಕೇಳಿದ ನ್ಯಾಯಮೂರ್ತಿಗಳು, ಸುಪಾರಿಯೇ? ಎಂದು ಅಚ್ಚರಿ ವ್ಯಕ್ತಪಡಿಸಿದರಲ್ಲದೆ, ಊಟದ ವ್ಯಾಪ್ತಿಯನ್ನು ನೀವು ವಿಸ್ತರಣೆ ಮಾಡುತ್ತಿದ್ದೀರಿ ಎಂದು ಲಘು ಧಾಟಿಯಲ್ಲಿ ಹೇಳಿದರು. ಬಳಿಕ ಸರ್ಕಾರಿ ಅಭಿಯೋಜಕರನ್ನು ಉದ್ದೇಶಿಸಿ, ಎಸ್‌ಪಿಪಿ ಅವರೇ ಏನಿದು ಕಾರಾಗೃಹದಲ್ಲಿ ಹಳೆಯಕಾಲದ ಸಮಸ್ಯೆಗಳು? ಎಂದು ಪ್ರಶ್ನಿಸಿದರು.

ಇವೆಲ್ಲ “ಸಾಂಪ್ರದಾಯಿಕ” ಸಮಸ್ಯೆಗಳು ಎಂದ ಸಿರಾಜುದ್ದೀನ್ ಅಹ್ಮದ್, ಪ್ರಕರಣ ಕುರಿತು ಹೆಚ್ಚಿನ ವಿವರ ನೀಡಲು ಮುಂದಾದರು. “ಸಾಂಪ್ರದಾಯಿಕ” ಪದ ಕೇಳಿ ನಸುನಕ್ಕ ನ್ಯಾಯಮೂರ್ತಿಗಳು, ಸದ್ಯ ನಿಮ್ಮ ಅರ್ಜಿ ವಿಚಾರಣೆಗೆ ಬಂದಿಲ್ಲ ಅಲ್ಲವೇ? ಅರ್ಜಿ ವಿಚಾರಣೆಗೆ ಬಂದ ದಿನ ನಿಮ್ಮ ವಾದ ಮಂಡಿಸಿ, ಈಗ ಬೇಡ ಎಂದು ವಕೀಲರಿಗೆ ಮೌಖಿಕವಾಗಿ ಸೂಚಿಸಿದರು.

ಅಂತಿಮವಾಗಿ, ವಕೀಲ ಸಿರಾಜುದ್ದೀನ್‌ ಅಹ್ಮದ್‌ ಆರೋಪಿಸಿರುವಂತೆ ಕಾರಾಗೃಹದಲ್ಲಿ ಗನ್‌, ಗಾಂಜಾ ಮತ್ತು ಬುಲೆಟ್‌ ಪೂರೈಕೆಯಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುವಂತೆ ಸರ್ಕಾರಿ ಅಭಿಯೋಜಕರಿಗೆ ಸೂಚಿಸಿದ ಪೀಠ, ಸಿರಾಜುದ್ದಿನ್‌ ಅಹ್ಮದ್‌ ವಕಲಾತ್ತು ವಹಿಸಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟಂಬರ್ 5ಕ್ಕೆ ನಿಗದಿಪಡಿಸಿದರು.

Related Articles

Comments (0)

Leave a Comment